ನನ್ನ ಟ್ರಸ್ಟ್'ನಲ್ಲಿರುವ ಪ್ರತಿ ರುಪಾಯಿಯೂ ಜೀವ ಉಳಿಸುವ ತನ್ನ ಅವಕಾಶಕ್ಕಾಗಿ ಕಾಯುತ್ತಿದೆ: ಐಟಿ ದಾಳಿ ಕುರಿತು ಸೋನು ಸೂದ್

ಪ್ರತೀ ರುಪಾಯಿಯೂ ನನ್ನ ಟ್ರಸ್ಟ್ ನಲ್ಲೇ ಇದ್ದು, ಜನರ ಜೀವ ಉಳಿಸುವ ಅವಕಾಶಕ್ಕಾಗಿ ಕಾಯುತ್ತಿದೆ ಎಂದು ನಟ ಸೋನು ಸೂದ್‌ ಅವರು ಸೋಮವಾರ ಹೇಳಿದ್ದಾರೆ.
ಸೋನು ಸೂದ್
ಸೋನು ಸೂದ್

ನವದೆಹಲಿ: ಪ್ರತೀ ರುಪಾಯಿಯೂ ನನ್ನ ಟ್ರಸ್ಟ್ ನಲ್ಲೇ ಇದ್ದು, ಜನರ ಜೀವ ಉಳಿಸುವ ಅವಕಾಶಕ್ಕಾಗಿ ಕಾಯುತ್ತಿದೆ ಎಂದು ನಟ ಸೋನು ಸೂದ್‌ ಅವರು ಸೋಮವಾರ ಹೇಳಿದ್ದಾರೆ.

ತಮ್ಮ ನಿವಾಸ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ಇದೇ ಮೊದಲ ಬಾರಿಗೆ ನಟ ಸೋನು ಸೂದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸೋನು ಸೂದ್ ಅವರು, ಪ್ರತಿ ರುಪಾಯಿ ಹಣವೂ ನನ್ನ ಟ್ರಸ್ಟ್ ನಲ್ಲಿಯೇ ಇದೆ. ಜನರ ಜೀವ ಉಳಿಸಲು ಕಾಯುತ್ತಿದೆ ಎಂದು ಹೇಳಿದ್ದಾರೆ. 

ನನ್ನ ಎಲ್ಲಾ ಶಕ್ತಿ ಹಾಗೂ ಹೃದಯದಿಂದ ನಾನು ಭಾರತದ ಜನರ ಸೇವೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡಿದೆ. ನನ್ನ ಟ್ರಸ್ಟ್‌ನಲ್ಲಿರುವ ಎಲ್ಲಾ ಒಂದು ರೂಪಾಯಿ ಹಣವು ಅತಿ ಮೌಲ್ಯಯುತ ಜೀವವನ್ನು ಉಳಿಸಲು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡಲು ಕಾಯುತ್ತಿದೆ. 

ನಾನು ಹಲವಾರು ಸಂದರ್ಭದಲ್ಲಿ ಹಲವು ಬ್ರಾಂಡ್‌ಗಳಿಗೆ ನನ್ನ ಸಮಾಜ ಕಲ್ಯಾಣ ಕಾರ್ಯಕ್ಕಾಗಿ ದೇಣಿಗೆ ನೀಡಲು ಕೇಳಿದ್ದೇನೆ, ಅದು ಇನ್ನು ಕೂಡಾ ಮುಂದುವರಿಯಲಿದೆ. ನಾನು ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳ ಸತ್ಕಾರ ಮಾಡುತ್ತಿದ್ದೆ, ಆದ್ದರಿಂದ ನನಗೆ ಕಳೆದ ನಾಲ್ಕು ದಿನದಿಂದ ನಿಮ್ಮ ಸೇವೆಯನ್ನು ಮಾಡಲು ಸಾಧ್ಯವಾಗಿಲ್ಲ. ಈಗ ನಾನು ಮತ್ತೆ ಜನರ ಸೇವೆಗಾಗಿ ವಾಪಾಸ್‌ ಬಂದಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ. 

ಕಠಿಣವಾದ ದಾರಿಯಲ್ಲಿಯೂ ಕೂಡಾ ಸುಲಭವಾದ ಪ್ರಯಾಣವು ಕಾಣಬಹುದು. ಎಲ್ಲಾ ಹಿಂದೂಸ್ತಾನಿಗಳ ಆಶೀರ್ವಾದ ಪರಿಣಾಮ ಎಂದು ಅನಿಸುತ್ತದೆ. ನಾವು ಎಲ್ಲಾ ಸಂದರ್ಭದಲ್ಲೂ ನಮ್ಮ ದೃಷ್ಟಿಯಿಂದ ನಿಜವಾಗಿ ಏನು ನಡೆದಿದೆ ಎಂಬುವುದನ್ನು ಹೇಳಬೇಕಾಗಿಲ್ಲ. ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ ಎಂದು ತಿಳಿಸಿದ್ದಾರೆ. 

ನಟ ಸೋನು ಸೂದ್‌ಗೆ ಸೇರಿದ ಆರು ಸ್ಥಳಗಳಲ್ಲಿ ಹಾಗೂ ನಟನ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆಯು ಇದು ಸಮೀಕ್ಷೆ ಎಂದು ಹೇಳಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಈ ದಾಳಿಯು ನಡೆದಿರುವ ಹಿನ್ನೆಲೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಆಪ್‌ ಹಾಗೂ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿತ್ತು.

ಸತತ ಮೂರು ದಿನಗಳ ಕಾಲ ನಟ ಸೋನು ಸೂದ್‌ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯು "ನಟ ಸೋನು ಸೂದ್‌ ಸುಮಾರು 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ," ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. 

"ಸೋನು ಸೂದ್‌ರ ಲಾಭರಹಿತ ಸಂಸ್ಥೆಯು ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ಕೊಡುಗೆದಾರರಿಂದ 2.1 ಕೋಟಿ ಹಣವನ್ನು ಸಂಗ್ರಹಿಸಿದೆ. ಇದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆಗಿದೆ," ಎಂದು ಆರೋಪ ಮಾಡಿತ್ತು.

"ಇನ್ನು ನಟನು ತೆರಿಗೆ ವಂಚನೆಯ ಉದ್ದೇಶದಿಂದಾಗಿ ಬ್ಯಾಂಕು ಖಾತೆಯ ಪುಸ್ತಕಗಳಲ್ಲಿ ವೃತ್ತಿಪರ ರಸೀದಿಗಳನ್ನು ಸಾಲಗಳೆಂದು ಮರೆಮಾಚಿದ ಉದಾಹರಣೆಗಳು ಕೂಡಾ ಇದೆ. ಹೂಡಿಕೆಯನ್ನು ಮಾಡಲು ಹಾಗೂ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ನಕಲಿ ಸಾಲಗಳನ್ನು ಬಳಸಲಾಗಿದೆ ಎಂದು ಕೂಡಾ ಬಹಿರಂಗವಾಗಿದೆ. ಇಲ್ಲಿಯವರೆಗೆ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಲಭಿಸಿದೆ," ಎಂದು ಐಟಿ ಇಲಾಖೆ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com