ಕತ್ರಿನಾ ಕೈಫ್ ದಂಪತಿಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿ ಎರಡು ದಿನ ಪೊಲೀಸ್ ಕಸ್ಟಡಿಗೆ

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸೋಷಿಯಲ್ ಮೀಡಿಯಾದ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಎರಡು ದಿನಗಳ ಅವಧಿಗೆ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಕತ್ರಿನಾ ಕೈಫ್‌ರೊಂದಿಗೆ ಫೋಟೊ ಎಡಿಟ್ ಮಾಡಿ ಹಾಕಿಕೊಂಡಿದ್ದ ಮನ್ವಿಂದರ್ ಸಿಂಗ್
ಕತ್ರಿನಾ ಕೈಫ್‌ರೊಂದಿಗೆ ಫೋಟೊ ಎಡಿಟ್ ಮಾಡಿ ಹಾಕಿಕೊಂಡಿದ್ದ ಮನ್ವಿಂದರ್ ಸಿಂಗ್

ನವದೆಹಲಿ: ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿತರಾಗಿರುವ ಇದೀಗ ತಾನೆ ನಟನೆಗೆ ಇಳಿದಿದ್ದ ಮನ್ವಿಂದರ್ ಸಿಂಗ್ ಎಂಬಾತನನ್ನು ಜುಲೈ 28 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಮುಂಬೈ ನ್ಯಾಯಾಲಯ ಆದೇಶಿಸಿದೆ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, 25 ವರ್ಷದ ಸಿಂಗ್, ಬಾಲಿವುಡ್ ನಲ್ಲಿ ಅಂಬೆಗಾಲು ಇಡುತ್ತಿದ್ದ ನಟ ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ. ಈತ ಕತ್ರಿನಾಳನ್ನು ಮದುವೆಯಾಗಲು ಬಯಸಿದ್ದನಂತೆ. ನಟಿಯೊಂದಿಗೆ ಎಡಿಟ್ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಿದ್ದ. ಕಳೆದ ಕೆಲವು ತಿಂಗಳಿಂದ ಆಕೆಯನ್ನು ಹಿಂಬಾಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಬಳಿಕ ಈತ, ಕತ್ರಿನಾ ಮತ್ತು ಆಕೆಯ ಪತಿ ವಿಕ್ಕಿ ಕೌಶಲ್‌ಗೆ ಜೀವ ಬೆದರಿಕೆಯೊಡ್ಡಲು ಆರಂಭಿಸಿದ್ದ. ಈ ಬಗ್ಗೆ ಕತ್ರಿನಾ ದಂಪತಿ ಸೋಮವಾರ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದರು. ಈ ವ್ಯಕ್ತಿ ತನಗೆ ಮತ್ತು ತನ್ನ ಪತ್ನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ವಿಕ್ಕಿ ದೂರಿನಲ್ಲಿ ತಿಳಿಸಿದ್ದರು.

ಈ ದೂರಿನ ಆಧಾರದ ಮೇಲೆ, ಸಾಂತಾಕ್ರೂಜ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯ ಇನ್‌ಸ್ಟಾಗ್ರಾಮ್‌ನಲ್ಲಿ, ತನ್ನ ಹೆಸರನ್ನು ಕಿಂಗ್ ಆದಿತ್ಯ ರಜಪೂತ್ VVIP ಎಂದು ಬರೆದುಕೊಂಡಿದ್ದಾನೆ. ಪ್ರೊಫೈಲ್ ಬಯೋದಲ್ಲಿ, ತನ್ನನ್ನು ತಾನು ನಟ ಎಂದು ವಿವರಿಸಿದ್ದಾನೆ. ಅಲ್ಲದೆ, ಈ ವ್ಯಕ್ತಿ ಬಯೋದಲ್ಲಿ ನನ್ನ ಗೆಳತಿ/ಹೆಂಡತಿ @katrinakaif ಎಂದು ಬರೆದಿದ್ದಾನೆ. ಆರೋಪಿ ಕತ್ರಿನಾಳ ಅಧಿಕೃತ ಐಡಿಯನ್ನೂ ತನ್ನ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿಕೊಂಡಿದ್ದಾನೆ.

ಪೊಲೀಸರು ಅದೇ ದಿನ ಮಲಾಡ್‌ನಿಂದ ಸಿಂಗ್‌ನನ್ನು ಬಂಧಿಸಿ ಇಂದು ಮುಂಜಾನೆ ಬಾಂದ್ರಾದ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com