ಮುಂಬೈ: ಪೋರ್ನ್ ಚಿತ್ರಗಳನ್ನು ಸೃಷ್ಟಿಸಿ ಆ್ಯಪ್‌ಗಳ ಮೂಲಕ ವಿತರಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ಉದ್ಯಮಿ ರಾಜ್ ಕುಂದ್ರಾ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ಅವರನ್ನು 2021ರ ಜುಲೈನಲ್ಲಿ ಬಂಧಿಸಲಾಗಿದ್ದು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಕುಂದ್ರಾ ಪರ ವಕೀಲ ಪ್ರಶಾಂತ್ ಪಾಟೀಲ್ ಅವರು ಜುಲೈ 20ರಂದು ಡಿಸ್ಚಾರ್ಜ್ ಅರ್ಜಿ ಸಲ್ಲಿಸಿದ್ದಾರೆ.
ಆಪಾದಿತ ಅಪರಾಧದಿಂದ ಕುಂದ್ರಾಗೆ ಯಾವುದೇ ಹಣ ಅಥವಾ ಇತರ ರೀತಿಯ ಲಾಭವನ್ನು ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಪೊಲೀಸರಿಗೆ ಸಿಕ್ಕಿಲ್ಲ. ಅವರಿಗೆ ಅಪರಾಧ ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 8ರಂದು ತನ್ನ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ತಿಳಿಸಿದೆ. ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿ ಕೆಲವು ಆರೋಪಗಳನ್ನು ಮಾಡಿದ ನಂತರ ಕುಂದ್ರಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು.
ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ 420 (ವಂಚನೆ), 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement