ಮುಂಬೈ: ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಮನೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ನಾಗ್ಪುರ ಪೊಲೀಸ್ ನಿಯಂತ್ರಣಕ್ಕೆ ಅನಾಮಧೇಯ ಕರೆ ಬಂದಿದೆ.
ಮೂಲಗಳ ಪ್ರಕಾರ, ಮುಖೇಶ್ ಅಂಬಾನಿಯವರ ಅದ್ದೂರಿ ಮನೆಯಾದ ಆಂಟಿಲಿಯಾದಲ್ಲಿಯೂ ಸ್ಫೋಟ ಸಂಭವಿಸಲಿದೆ ಎಂದು ಕರೆ ಮಾಡಿದವರು ಹೇಳಿಕೊಂಡಿದ್ದಾರೆ.
ಈ ಕರೆ ಮಾಡಿದ ಕೂಡಲೇ ನಾಗ್ಪುರ ಪೊಲೀಸ್ ಕಂಟ್ರೋಲ್ ರೂಂ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. ಮುಂಬೈ ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮುಂಬೈ ಪೊಲೀಸರಿಗೆ ಇದು ಹುಸಿ ಕರೆಯೇ ಎಂದು ಸಹ ಹೇಳಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ.
ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಐದು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅವರ ಮನೆಗಳ ಹೆಸರು- ಜಲ್ಸಾ, ಜನಕ್, ವತ್ಸಾ ಮತ್ತು ಪ್ರತೀಕ್ಷಾ. ಪ್ರತೀಕ್ಷಾ ಮುಂಬೈನಲ್ಲಿ ಬಚ್ಚನ್‌ಗಳು ಖರೀದಿಸಿದ ಮೊದಲ ಮನೆಯಾಗಿದೆ. ಇದು ಅಮಿತಾಭ್ ಅವರ ದಿವಂಗತ ಪೋಷಕರು ವಾಸಿಸುತ್ತಿದ್ದ ಮನೆ. ಸದ್ಯ, ಇಡೀ ಬಚ್ಚನ್ ಕುಟುಂಬ ಜಲ್ಸಾದಲ್ಲಿ ನೆಲೆಸಿದೆ. ಮತ್ತೊಂದೆಡೆ, ಧರ್ಮೇಂದ್ರ ಜುಹುದಲ್ಲಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಅಂಬಾನಿ ಕುಟುಂಬಕ್ಕೆ Z+ ಭದ್ರತೆ
ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ Z+ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. ಮುಂಬೈನಲ್ಲಿ ಮಾತ್ರವಲ್ಲದೆ ದೇಶ ಮತ್ತು ವಿದೇಶಗಳಲ್ಲಿಯೂ ಅವರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಈ ಭದ್ರತಾ ವ್ಯವಸ್ಥೆಯ ಎಲ್ಲಾ ವೆಚ್ಚವನ್ನು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಭರಿಸಲಿದ್ದಾರೆ ಎಂದೂ ನ್ಯಾಯಾಲಯ ಹೇಳಿದೆ.
Advertisement