ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬೆನ್ನಿಗೆ ನಿಂತ ಅಮಿತಾಬ್ ಬಚ್ಚನ್; ವೈರಲ್ ವಿಡಿಯೋ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ!
ನಟಿ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ರಶ್ಮಿಕಾ ಪರ ನಿಂತಿದ್ದಾರೆ. ಕಪ್ಪು ಬಟ್ಟೆಯನ್ನು ಧರಿಸಿರುವ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಮಹಿಳೆಯ ಮುಖಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನಿಟ್ಟು ತಿರುಚಲಾಗಿತ್ತು. ವಿಡಿಯೋ ವೈರಲ್ ಆದ ನಂತರ, ಅನೇಕರು ಇದು ನಕಲಿ ಎಂದು ಸೂಚಿಸಿದ್ದು, ಅಮಿತಾಬ್ ಬಚ್ಚನ್ ಅವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದನ್ನು ಗಮನಿಸಿದ ಅಮಿತಾಬ್ ಬಚ್ಚನ್ ಅವರು, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮೂಲ ವಿಡಿಯೋದಲ್ಲಿರುವ ಮಹಿಳೆ ಜರಾ ಪಟೇಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಬ್ರಿಟಿಷ್ ಭಾರತೀಯ ಯುವತಿಯಾಗಿದ್ದಾರೆ. ಈಕೆ ಅಕ್ಟೋಬರ್ 9ರಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಆಲ್ಟ್ ನ್ಯೂಸ್ ಪತ್ರಕರ್ತ ಅಭಿಷೇಕ್ ಎಂಬುವವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ರೀಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, 'ಹೌದು ಇದು ಕಾನೂನು ಕ್ರಮ ತೆಗೆದುಕೊಳ್ಳಬೇಕಿರುವ ಗಂಭೀರವಾದ ಪ್ರಕರಣವಾಗಿದೆ' ಎಂದು ಬರೆದಿದ್ದಾರೆ. ಈಮಧ್ಯೆ, ರಶ್ಮಿಕಾ ವಿಡಿಯೋ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ರಶ್ಮಿಕಾ ಮಂದಣ್ಣ ಅವರು 2022ರಲ್ಲಿ 'ಗುಡ್‌ಬೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಚಿತ್ರದಲ್ಲಿ ನಟ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ. ವಿಕಾಸ್ ಬೆಹ್ಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ನೀನಾ ಗುಪ್ತಾ, ಪಾವೈಲ್ ಗುಲಾಟಿ, ಎಲ್ಲಿ ಅವ್ರಾಮ್, ಸುನೀಲ್ ಗ್ರೋವರ್ ಮತ್ತು ಸಾಹಿಲ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಬಿಗ್ ಬಿ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ.
ಸದ್ಯ ರಶ್ಮಿಕಾ ಅವರು 'ಅನಿಮಲ್' ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸೆಂಬರ್ 1ರಂದು ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ.
ಮತ್ತೊಂದೆಡೆ, ಬಿಗ್ ಬಿ ಅವರು ವೈಜ್ಞಾನಿಕ ಆ್ಯಕ್ಷನ್ ಥ್ರಿಲ್ಲರ್ 'ಕಲ್ಕಿ 2898 AD', 'ಸೆಕ್ಷನ್ 84' ಮತ್ತು ರಜನಿಕಾಂತ್ ಅವರ ನಟನೆಯ 'ತಲೈವರ್ 170' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ