ಸಾಮಾಜಿಕ ಮಾಧ್ಯಮಗಳಲ್ಲಿ ಡೀಪ್ ಫೇಕ್ ವಿಡಿಯೋ ವೈರಲ್; 'ಅತ್ಯಂತ ಭಯಾನಕ' ಎಂದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ರಶ್ಮಿಕಾ ಪ್ರತಿಕ್ರಿಯಿಸಿದ್ದು, 'ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುಗುತ್ತಿರುವ ಕಾರಣ ಜನರು ಇದನ್ನು ಒಟ್ಟಾಗಿ ಪರಿಹರಿಸಬೇಕಾಗಿದೆ' ಎಂದಿದ್ದಾರೆ. ನಟಿ ತನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದರು. 
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ರಶ್ಮಿಕಾ ಪ್ರತಿಕ್ರಿಯಿಸಿದ್ದು, 'ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುಗುತ್ತಿರುವ ಕಾರಣ ಜನರು ಇದನ್ನು ಒಟ್ಟಾಗಿ ಪರಿಹರಿಸಬೇಕಾಗಿದೆ' ಎಂದಿದ್ದಾರೆ. ನಟಿ ತನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ ಮತ್ತು ನಾನು ಆನ್‌ಲೈನ್‌ನಲ್ಲಿ ಹರಡಿರುವ ಡೀಪ್‌ಫೇಕ್ ವಿಡಿಯೋದ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ ವಿಚಾರವಾಗಿದೆ. ತಂತ್ರಜ್ಞಾನವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಇಂದು ನಾವು ತುಂಬಾ ಹಾನಿಗೆ ಗುರಿಯಾಗುತ್ತಿದ್ದೇವೆ' ಎಂದಿದ್ದಾರೆ.

ವೈರಲ್ ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿರುವ ಬ್ರಿಟಿಷ್-ಭಾರತೀಯ ಮಹಿಳೆಯೊಬ್ಬರು ಲಿಫ್ಟ್‌ನೊಳಗೆ ಬರುವುದನ್ನು ಕಾಣಬಹುದಾಗಿದೆ. ಈ ವಿಡಿಯೋಗೆ ರಶ್ಮಿಕಾ ಅವರನ್ನು ಹೋಲುವಂತೆ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಎಡಿಟ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮುಂದುವರಿದು, 'ನನ್ನ ರಕ್ಷಣೆ ಮತ್ತು ಬೆಂಬಲದ ವ್ಯವಸ್ಥೆಯಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಇಂದು, ಮಹಿಳೆಯಾಗಿ ಮತ್ತು ನಟಿಯಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಈ ರೀತಿ ಆಗಿದ್ದರೆ, ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹದ್ದಕ್ಕೆ ಬಲಿಯಾಗುವ ಮುನ್ನ ನಾವು ಇದನ್ನು ಒಟ್ಟಾಗಿ ಮತ್ತು ತುರ್ತಾಗಿ ಪರಿಹರಿಸಬೇಕಾಗಿದೆ' ಎಂದಿರುವ ರಶ್ಮಿಕಾ, ಸೈಬರಾಬಾದ್ ಪೋಲೀಸ್ ಮತ್ತು ಮಹಾರಾಷ್ಟ್ರದ ಸೈಬರ್ ಭದ್ರತೆ ಮತ್ತು ಸೈಬರ್ ಕ್ರೈಮ್ ತನಿಖೆಯ ನೋಡಲ್ ಏಜೆನ್ಸಿಯಾದ ಮಹಾರಾಷ್ಟ್ರ ಸೈಬರ್‌ನ ಅಧಿಕೃತ ಎಕ್ಸ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ.

ರಶ್ಮಿಕಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೆಲವು ಟ್ವಿಟರ್ ಬಳಕೆದಾರರು, ಸಾಂತ್ವನದ ಮಾತುಗಳನ್ನಾಡಿದ್ದಾರೆ. 'ನಾವು ಇದರಲ್ಲಿ ನಿಮ್ಮೊಂದಿಗೆ ನಿಲ್ಲುತ್ತೇವೆ!!! ನಾವು ಜಾಗೃತಿ ಮೂಡಿಸೋಣ ಮತ್ತು ತಂತ್ರಜ್ಞಾನದ ಇಂತಹ ದುರ್ಬಳಕೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡೋಣ. ನೀವು ಇದರಲ್ಲಿ ಒಬ್ಬಂಟಿಯಲ್ಲ ಮತ್ತು ನಾವು ನಿಮ್ಮನ್ನು ಬೆಂಬಲಿಸುತ್ತೇವೆ' ಎಂದು ಒಬ್ಬರು ಬರೆದಿದ್ದಾರೆ.

ಇನ್ನೊಬ್ಬರು 'ಈ ವಿಡಿಯೋ ಕನಿಷ್ಠ ನೋಡಬಹುದಾಗಿದೆ. ಆದರೆ, ಇದಕ್ಕಿಂತ ಕೆಟ್ಟದಾಗಿ ತಿರುಚುವವರಿದ್ದಾರೆ. ಮುಂದೆ ಕ್ರಮ ತೆಗೆದುಕೊಳ್ಳುವುದಕ್ಕಿಂತ ಈಗಲೇ ಅಗತ್ಯ ಕ್ರಮ ತೆಗೆದುಕೊಳ್ಳುವುದು ಉತ್ತಮ' ಎಂದಿದ್ದಾರೆ. ಮತ್ತೊಬ್ಬರು, 'ಡೀಪ್‌ಫೇಕ್ ವಿಡಿಯೋಗಳಿಂದ ಉಂಟಾದ ಹಾನಿಯನ್ನು ನೋಡುವುದು ನಿರಾಶಾದಾಯಕವಾಗಿದೆ. ತಂತ್ರಜ್ಞಾನದ ದುರುಪಯೋಗದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆನ್‌ಲೈನ್‌ನಲ್ಲಿ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ' ಎಂದಿದ್ದಾರೆ.

ಕಾನೂನು ಕ್ರಮಕ್ಕೆ ಅಮಿತಾಬ್ ಬಚ್ಚನ್ ಒತ್ತಾಯ

ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ನಟ ಅಮಿತಾಬ್ ಬಚ್ಚನ್ ಅವರು, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

ಮೂಲ ವಿಡಿಯೋದಲ್ಲಿರುವ ಮಹಿಳೆ ಜರಾ ಪಟೇಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಬ್ರಿಟಿಷ್ ಭಾರತೀಯ ಯುವತಿಯಾಗಿದ್ದಾರೆ. ಈಕೆ ಅಕ್ಟೋಬರ್ 9ರಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಆಲ್ಟ್ ನ್ಯೂಸ್ ಪತ್ರಕರ್ತ ಅಭಿಷೇಕ್ ಎಂಬುವವರು ಸ್ಪಷ್ಟಪಡಿಸಿದ್ದಾರೆ. 

ಇದನ್ನು ರೀಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, 'ಹೌದು ಇದು ಕಾನೂನು ಕ್ರಮ ತೆಗೆದುಕೊಳ್ಳಬೇಕಿರುವ ಗಂಭೀರವಾದ ಪ್ರಕರಣವಾಗಿದೆ' ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com