ಕೃತಿಚೌರ್ಯ ಆರೋಪ: 'ಮೈದಾನ್' ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಕೃತಿಚೌರ್ಯ ಆರೋಪದ ಮೇಲೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಪ್ರಧಾನ ಭೂಮಿಕೆಯಲ್ಲಿರುವ 'ಮೈದಾನ್‌ʼ (ಇಂದು ಬಿಡುಗಡೆಯಾಗಿದೆ) ಚಿತ್ರ ಬಿಡುಗಡೆಯ ವಿರುದ್ಧ ಪ್ರತಿಬಂಧಕಾದೇಶ ಮಾಡಿದ್ದ ಮೈಸೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ. ಇದರಿಂದ ಸಿನಿಮಾ ಬಿಡುಗಡೆಗಿದ್ದ ವಿಘ್ನ ನಿವಾರಣೆಯಾದಂತಾಗಿದೆ.
maidaan
ಮೈದಾನ್ ಚಿತ್ರTNIE
Updated on

ಬೆಂಗಳೂರು: ಕೃತಿಚೌರ್ಯ ಆರೋಪದ ಮೇಲೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಪ್ರಧಾನ ಭೂಮಿಕೆಯಲ್ಲಿರುವ 'ಮೈದಾನ್‌ʼ (ಇಂದು ಬಿಡುಗಡೆಯಾಗಿದೆ) ಚಿತ್ರ ಬಿಡುಗಡೆಯ ವಿರುದ್ಧ ಪ್ರತಿಬಂಧಕಾದೇಶ ಮಾಡಿದ್ದ ಮೈಸೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ. ಇದರಿಂದ ಸಿನಿಮಾ ಬಿಡುಗಡೆಗಿದ್ದ ವಿಘ್ನ ನಿವಾರಣೆಯಾದಂತಾಗಿದೆ.

ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಆದೇಶ ಪ್ರಶ್ನಿಸಿ ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್‌ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಶೇಷ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸಿ ಆರ್‌ ಅನಿಲ್‌ ಕುಮಾರ್‌ ಮತ್ತು ಇತರರಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2024ರ ಏಪ್ರಿಲ್‌ 8ರಂದು ಮಾಡಿರುವ ಆದೇಶಕ್ಕೆ ಮುಂದಿನ ಆದೇಶದವರೆಗೆ ತಡೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದ್ದು, ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಮುಂದೂಡಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು ಆಕ್ಷೇಪಾರ್ಹವಾದ ತಾತ್ಕಾಲಿಕ ಪ್ರತಿಬಂಧಕಾದೇಶದಿಂದ ಜಗತ್ತಿನಾದ್ಯಂತ ಮತ್ತು ಒಟಿಟಿ ವೇದಿಕೆಗಳಲ್ಲಿ ಮೈದಾನ್‌ ಸಿನಿಮಾ ಬಿಡುಗಡೆಗೆ ತೊಡಕುಂಟಾಗಿದೆ. 2019ರಲ್ಲಿ ಚಿತ್ರ ನಿರ್ಮಾಣ ಆರಂಭವಾಗಿದ್ದು, ಕೋವಿಡ್‌ನಿಂದಾಗಿ ವಿಳಂಬವಾಗಿತ್ತು. ಆಕ್ಷೇಪಾರ್ಹವಾದ ಆದೇಶದಿಂದ ಅರ್ಜಿದಾರರಿಗೆ ಅಪಾರ ಹಾನಿಯಾಗಿದೆ ಎಂದಿದ್ದರು.

ಫಿರ್ಯಾದಿ ಅನಿಲ್‌ ಕುಮಾರ್‌ ಪರ ವಕೀಲರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಸಿ ಡಿ ಹಾಕಿ ಮತ್ತು 65ಬಿ ಸರ್ಟಿಫಿಕೇಟ್‌ ಹಾಜರುಪಡಿಸಿದ್ದಾರೆ (ಎಲೆಕ್ಟ್ರಾನಿಕ್‌ ಸಾಕ್ಷ್ಯವನ್ನು ಪರಿಗಣಿಸುವ ಕುರಿತಾದ ಕಾಯಿದೆ). ನೋಂದಾಯಿತ ಸರ್ಟಿಫಿಕೇಟ್‌ ಮತ್ತು ಸಿಡಿಯಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ಪಥಂಡುಗ ಮತ್ತು ಏಪ್ರಿಲ್‌ 10ರಂದು ಬಿಡುಗಡೆಯಾಗುತ್ತಿರುವ ಮೈದಾನ್‌ ಸಿನಿಮಾದಲ್ಲಿನ ಕತೆಯಲ್ಲಿ ಸಾಮ್ಯತೆ ಇದೆ. ಈ ಮೂಲಕ ಮೇಲ್ನೋಟಕ್ಕೆ ಮೈದಾನ್‌ ಸಿನಿಮಾದ ಕತೆಯು ಟೀಸರ್‌ನಲ್ಲಿ ನೋಡಿದರೆ ಒಂದೇ ಆಗಿದೆ ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.

maidaan
ಅಜಯ್ ದೇವಗನ್ ನಟನೆಯ ಮೈದಾನ್ ಚಿತ್ರಕ್ಕೆ ಮೈಸೂರು ಕೋರ್ಟ್ ನಿಂದ ತಡೆ!

ಫಿರ್ಯಾದಿಯ ಸಿನಿಮಾವು ಐತಿಹಾಸಿಕ ಘಟನೆಗಳನ್ನು ಆಧಿರಿಸಿದ್ದು, 2019ರಲ್ಲಿ ತಮ್ಮ ಕತೆಯನ್ನು ಅನಿಲ್‌ ಕುಮಾರ್‌ ನೋಂದಾಯಿಸಿದ್ದಾರೆ. ಮೈದಾನದ ಚಿತ್ರದ ಸಹಾಯಕ ನಿರ್ದೇಶಕ ಸುಖದಾಸ್‌ ಸೂರ್ಯವಂಶಿ ಅವರ ಜೊತೆ ಅನಿಲ್‌ ಕುಮಾರ್‌ ಚಿತ್ರದ ಕತೆಯ ಕುರಿತು ಚರ್ಚಿಸಿದ್ದು, ಸ್ವಲ್ಪ ಬದಲಾವಣೆ ಮಾಡಿ ಮೈದಾನ್‌ ಚಿತ್ರ ನಿರ್ಮಿಸಲಾಗಿದೆ ಎಂಬುದನ್ನು ಮೇಲ್ನೋಟಕ್ಕೆ ರುಜುವಾತು ಪಡಿಸಿದ್ದಾರೆ. ಹೀಗಾಗಿ, ಪ್ರತಿವಾದಿಗಳು ನ್ಯಾಯಾಲಯದ ಮುಂದೆ ಬರುವವರೆಗೆ ಮೈದಾನ್‌ ಚಿತ್ರವನ್ನು ಯಾವುದೇ ಭಾಷೆ ಅಥವಾ ಒಟಿಟಿ, ಎಲೆಕ್ಟ್ರಾನಿಕ್ ಮತ್ತು ಮ್ಯಾಗ್ನೆಟಿಕ್‌ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಬಂಧಿಸಲಾಗಿದೆ ಎಂದು ಏಪ್ರಿಲ್‌ 8ರಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ ಆದೇಶಿಸಿದ್ದರು. ಈ ಆದೇಶಕ್ಕೆ ಹೈಕೋರ್ಟ್‌ ಈಗ ತಡೆ ವಿಧಿಸಿದೆ.

ಭಾರತೀಯ ಫುಟ್‌ಬಾಲ್‌ ಕಥಾಹಂದರ ಹೊಂದಿರುವ ಚಿತ್ರಕತೆ ರೂಪಿಸಿದ್ದ ಅನಿಲ್‌ ಕುಮಾರ್‌ ಅವರು ತಮ್ಮ ಸಿನಿಮಾದ ಕತೆಯ ಸಾರಾಂಶ, ಚಿತ್ರದ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಜಾಹೀರಾತು ನಿರ್ದೇಶಕ ಮತ್ತು ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡಿದ್ದ ಮೂಲ ದಾವೆಯಲ್ಲಿ ಮೂರನೇ ಪ್ರತಿವಾದಿ ಸುಖದಾಸ್‌ ಸೂರ್ಯವಂಶಿ ಅವರು ಅನಿಲ್‌ ಕುಮಾರ್‌ ಸಂಪರ್ಕಕ್ಕೆ ಬಂಧಿದ್ದರು. ಅನಿಲ್‌ ಕುಮಾರ್‌ ಪೋಸ್ಟರ್‌ ಆಕರ್ಷಕವಾಗಿದ್ದು, ಕತೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಬಾಲಿವುಡ್‌ ಪ್ರಮುಖ ಸಿನಿಮಾ ನಿರ್ಮಾತೃಗಳನ್ನು ಭೇಟಿ ಮಾಡಿಸಲು ಮುಂಬೈಗೆ ಬರುವಂತೆ ಆಹ್ವಾನಿಸಿದ್ದರು.

maidaan
ಪಂಚನಾಮೆ ಆಧಾರದಲ್ಲಿ ಎಫ್ಐಆರ್ ದಾಖಲು ಸರಿಯಲ್ಲ: ಹೈಕೋರ್ಟ್

ಇಲ್ಲಿ ಸಾಕಷ್ಟು ಚರ್ಚೆಯ ಬಳಿಕ 2019ರ ಫೆಬ್ರವರಿ 20ರಂದು ಕತೆಯನ್ನು ಅನಿಲ್‌ ಕುಮಾರ್‌ ಅವರು ಚಿತ್ರಕತೆ ಬರಹಗಾರರ ಸಂಘದಲ್ಲಿ ʼಪಟ್ಗಂಡುಗʼ ಹೆಸರಿನಲ್ಲಿ ನೋಂದಾಯಿಸಿದ್ದರು. 150 ಪುಟಗಳ ಚಿತ್ರಕತೆ, ಸಂಭಾಷಣೆಯನ್ನು ನೋಂದಾಯಿಸಲಾಗಿತ್ತು. ಕತೆಗಾರರ ಹೆಸರಿನಲ್ಲಿ ಚಿತ್ರದ ಹೆಸರನ್ನು ನೋಂದಾಯಿಸಲು ಆಗದ ಹಿನ್ನೆಲೆಯಲ್ಲಿ ಸೂರ್ಯವಂಶಿ ಅವರ ಹೆಸರಿನಲ್ಲಿ ಟೈಟಲ್‌ ನೋಂದಾಯಿಸಲಾಗಿತ್ತು ಎಂದು ಮೂಲ ದಾವೆಯಲ್ಲಿ ವಿವರಿಸಲಾಗಿದೆ.

ಆದರೆ, ಕಳೆದ ವಾರ ತಮ್ಮ ಚಿತ್ರಕತೆಯ ಹಂದರ ಹೊಂದಿರುವ ಮೈದಾನ್‌ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಜೀ ಸ್ಟುಡಿಯೋಸ್‌ ಮತ್ತು ಬೋನಿ ಕಪೂರ್‌ ನಿರ್ಮಿಸಿರುವ ಚಿತ್ರದ ಟ್ರೇಲರ್‌ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದ್ದು, ತಾನು ರೂಪಿಸಿದ ಕತೆಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಸಿನಿಮಾ ಬರಹಗಾರರು ಬಳಕೆ ಮಾಡಿಕೊಂಡಿದ್ದಾರೆ. ಎರಡು ಭಾಗದಲ್ಲಿ ತಾನು ಭಾರತೀಯ ಫುಟ್‌ಬಾಲ್‌ಗೆ ಸಂಬಂಧಿಸಿದ ಕತೆ ಬರೆದಿದ್ದು, ಎರಡನೇ ಭಾಗದ ಕತೆ, ಸಂಭಾಷಣೆ ಮತ್ತು ಚಿತ್ರಕತೆ ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಅನಿಲ್‌ ಕುಮಾರ್‌ ಮೂಲ ದಾವೆ ಹೂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com