
ಬೆಂಗಳೂರು: ಬಾಲಿವುಡ್‌ನ ಟಾಪ್ ನಟಿ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ ಸದ್ಯ ಮಗುವಿನ ಆರೈಕೆಯಲ್ಲಿದ್ದಾರೆ. ಮಗಳು ದುವಾ ಜತೆಗೆ ತಾಯ್ತನದ ಖುಷಿಯನ್ನು ಕಳೆಯುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಕೆಲ ಕಾಲ ದೂರ ಉಳಿದಿರುವ ದೀಪಿಕಾ, ದುವಾಳಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಈ ನಡುವೆ ಮಗಳ ಆಗಮನ ಬಳಿಕ ಮೊದಲ ಸಲ ವೇದಿಕೆ ಕಾರ್ಯಕ್ರಮದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಅದೂ ತವರು ಮನೆ ಬೆಂಗಳೂರಿನಲ್ಲಿ.
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಗಾಯಕ ದಿಲ್ಜಿತ್ ದೋಸಾಂಜ್ ಅವರ ಲೈವ್ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿ ನೆರೆದಿದ್ದವರನ್ನು ಆಕರ್ಷಿಸಿದರು.
ಹೆರಿಗೆ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ 'ಪಿಕು' ನಟಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ವೇದಿಕೆಯ ಮೇಲೆ ದಿಲ್ಜಿತ್‌ಗೆ ಶೀಘ್ರವಾಗಿ ಕನ್ನಡ ಪಾಠವನ್ನು ಮಾಡಿದ್ದಾರೆ ಈ ವಿಡಿಯೋ ವೈರಲ್ ಆಗಿದೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ದಿಲ್ಜಿತ್ ದೀಪಿಕಾರನ್ನು ವೇದಿಕೆಗೆ ಕರೆದಿದ್ದಾರೆ. ದೀಪಿಕಾ ವೇದಿಕೆಗೆ ಬರುತ್ತಿದ್ದಂತೆಯೇ ಸಂಗೀತ ಕಾರ್ಯಕ್ರಮ ನೋಡಲು ಬಂದಿದ್ದ ಪ್ರೇಕ್ಷಕ ಸಾಗರದಿಂದ ಶಿಳ್ಳೆ ಚಪ್ಪಾಳೆಗಳು ಜೋರಾದವು. ವೇದಿಕೆ ಬಂದ ಕೂಡಲೇ ಇಡೀ ಪ್ರೇಕ್ಷಕಸ್ತೋಮವನ್ನು ಕಂಡ ದೀಪಿಕಾ ನಮಸ್ಕಾರ ಬೆಂಗಳೂರು ಎಂದು ಕೂಗಿಕೊಂಡರು.
ದೀಪಿಕಾ ಪಡುಕೋಣೆ ನಮಸ್ಕಾರ ಬೆಂಗಳೂರು ಎಂದಾಗ ದಿಲ್ಜಿತ್ ನಾನು ಈಗಾಗಲೇ ಇದನ್ನು ಹೇಳಿದ್ದೇನೆ. ನಮಸ್ಕಾರ ಬೆಂಗಳೂರು ಹೇಗಿದ್ದೀರಿ ಎಂದು ಕೇಳಿದ್ದೇನೆ ಎಂದಾಗ. ನಟಿ ದೀಪಿಕಾ ನಾನು ಚಿಕ್ಕವಳಿದ್ದಾಗ ಶಾಲೆಯಲ್ಲಿ ಕನ್ನಡವನ್ನು ಕಲಿತಿದ್ದೇನೆ ಎಂದು ಹೇಳಿದ್ರು, ಅದರ ಜೊತೆಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೂಡ ಹೇಳಿಕೊಟ್ಟರು. ಇದನ್ನು ಪ್ರೇಕ್ಷಕರಿಂದ ಹರ್ಷೋದ್ಗಾರ ಮತ್ತಷ್ಟು ಹೆಚ್ಚಿತು. ಇನ್ನು ಮತ್ತೊಂದು ಕಡೆ ದೀಪಿಕಾರನ್ನು ದಿಲ್ಜಿತ್ ಹಾಡಿ ಹೊಗಳಿದ್ದಾರೆ. ನೀವು ಈಗಾಗಲೇ ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ಇದು ನಮಗೆಲ್ಲಾ ಹೆಮ್ಮೆ ತರುವ ವಿಚಾರ, ನನ್ನ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ದಿಲ್ಜಿತ್ ಹೇಳಿದರು. ಗಾಯಕ ದಿಲ್ಜೀತ್‌ಗೆ ಕನ್ನಡ ಕಲಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ. ಜತೆಗೆ ದಿಲ್ಜಿತ್ ಜತೆ ಸೇರಿ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ. ನಿಂತಲ್ಲೇ ಹೆಜ್ಜೆಹಾಕಿದ್ದಾರೆ. ಈ ಲೈವ್ ಕಾನ್ಸರ್ಟ್‌ನ ಬಿಡಿ ಬಿಡಿ ವಿಡಿಯೋಗಳೀಗ ಜಾಲತಾಣದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಬಹುದಿನಗಳ ಬಳಿಕ ದೀಪಿಕಾ ಅವರನ್ನು ನೋಡಿದ ಖುಷಿಯಲ್ಲಿದ್ದಾರೆ ಬೆಂಗಳೂರಿಗರು.
Advertisement