ಮುಂಬೈ: ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದ್ದು, ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಈ ಹಿಂದೆ ರಾಜ್ ಕುಂದ್ರಾ ಬಂಧನಕ್ಕೀಡಾಗಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಜ್ ಕುಂದ್ರಾ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡಿರುವ ರಾಜ್ ಕುಂದ್ರಾ ಅವರು ಮುಂಬೈನಲ್ಲಿ ವಾಸಿಸುತ್ತಿದ್ದು, ನಟರಿಗೆ ಹಣ ವಂಚನೆ ಕೇಸ್ಗೆ ಸಂಬಂಧಿಸಿದಂತೆ ಹಲವಾರು ಸಲ ಕಾನೂನು ಸಮಸ್ಯೆ ಎದುರಿಸಿದ್ದಾರೆ.
ನೀಲಿ ಚಿತ್ರ ತಾರೆ ಬಂಧನ
ಬಾಂಗ್ಲಾದೇಶದ ಅಡಲ್ಟ್ ಫಿಲ್ಮ್ ಆ್ಯಕ್ಟರ್ ರಿಯಾ ಅರವಿಂದ ಬರ್ದೆ ಅವರು ಮಹಾರಾಷ್ಟ್ರದ ಉಲ್ಹಾಸನಗರದಲ್ಲಿ ಅರೆಸ್ಟ್ ಆಗಿದ್ದರು. ಅವರು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಭಾರತದಲ್ಲಿ ಇದ್ದ ಆರೋಪದ ಮೇಲೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಅವರು ರಾಜ್ ಕುಂದ್ರಾ ಮಾಡಿದ್ದ ಪ್ರಾಜೆಕ್ಟ್ಗಳಲ್ಲಿಯೂ ಕೆಲಸ ಮಾಡಿದ್ದರು ಎನ್ನಲಾಗಿತ್ತು.
ಏನಿದು ಪ್ರಕರಣ?
ರಾಜ್ ಕುಂದ್ರಾ ಅವರು 2021ರಲ್ಲಿ ಜೂನ್ನಲ್ಲಿ ಅರೆಸ್ಟ್ ಆಗಿದ್ದರು. ನೀಲಿ ಚಿತ್ರಗಳನ್ನು ನಿರ್ಮಿಸಿದ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ಕೂಡ ಆಗಿರುವ ರಾಜ್ ಕುಂದ್ರಾರನ್ನು ಬಂಧಿಸಲಾಗಿತ್ತು. ನಂತರ ಸೆಪ್ಟೆಂಬರ್ ತಿಂಗಳಲ್ಲಿ ಜಾಮೀನು ಸಿಕ್ಕಿತ್ತು. ಶಿಲ್ಪಾ ಶೆಟ್ಟಿ ಪತಿ 2 ತಿಂಗಳು ಜೈಲಿನಲ್ಲಿ ಕಳೆದಿದ್ದರು.
ಈ ಇಡೀ ಕೇಸ್ನಲ್ಲಿ ರಾಜ್ ಕುಂದ್ರಾ ಮುಖ್ಯ ಮಾಸ್ಟರ್ ಪ್ಲಾನರ್ ಎಂದು ಮುಂಬೈ ಪೊಲೀಸರು ಹೇಳಿಕೆ ಕೊಟ್ಟಿದ್ದರು. 2021 ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ನೀಲಿ ಚಿತ್ರ ನೆಟ್ವರ್ಕ್ ಬೇಧಿಸಿದ್ದರು. ಈ ಒಂದು ಪ್ರಕರಣದಲ್ಲಿ ಐದು ಜನರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಹೆಚ್ಚಿನ ತನಿಖೆಯಾಗಿ ಮತ್ತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಆ ನಂತರ ಮುಂಬೈ ಪೊಲೀಸ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡದ ನೇತೃತ್ವ ಬದಲಾಗಿ ಈ ಕೇಸ್ ಸುದ್ದಿಯಿಂದ ದೂರವಾಗಿತ್ತು.
ಜೂನ್ನಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆಯಲ್ಲಿ ರಾಜ್ ಕುಂದ್ರಾ ಒಡೆತನದ ಹಾಟ್ ಶಾಟ್ಸ್ ಎಂಬ ಎಪ್ಲಿಕೇಷನ್ ಬಗ್ಗೆ ರಿವೀಲ್ ಆಗಿತ್ತು. ಈ ಎಪ್ಲಿಕೇಷನ್ಗೆ ರಾಜ್ ಕುಂದ್ರಾ ಕಂಪೆನಿಯ ಮಾಲೀಕತ್ವ ಇತ್ತು. ನಂತರದಲ್ಲಿ ಈ ಕುರಿತು ತನಿಖೆಯಾಗಿ ಇದರಲ್ಲಿ ಅಡಲ್ಟ್ ಕಂಟೆಂಟ್ ಪತ್ತೆಯಾಗಿ ಸರ್ವರ್ ಸೀಜ್ ಮಾಡಲಾಗಿತ್ತು. ಇದೀಗ ಮತ್ತೆ ರಾಜ್ ಕುಂದ್ರಾ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಮತ್ತೆ ಈ ಪ್ರಕರಣ ಜೀವ ಪಡೆದುಕೊಂಡಿದೆ.
Advertisement