ಮುಂಬೈ: ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ, ಕಸೌಟಿ ಜಿಂದಗಿ ಕೆ, ಕಹಿ ತೋ ಹೋಗಾ ಮುಂತಾದ ಧಾರಾವಾಹಿಗಳಿಂದ ಖ್ಯಾತರಾಗಿದ್ದ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಶನಿವಾರ ರಾತ್ರಿ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಕುಟುಂಬದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ನಾಸಿಕ್ ಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿರುವುದಾಗಿ ಅವರ ಪತ್ನಿ ಜಾನ್ವಿ ಸೇಥಿ ತಿಳಿಸಿದ್ದಾರೆ.
ನಾಸಿಕ್‌ನಲ್ಲಿರುವ ನನ್ನ ತಾಯಿಯ ಮನೆ ತಲುಪಿದ ನಂತರ ವಿಕಾಸ್ ಸೇಥಿಗೆ ವಾಂತಿ ಮತ್ತು ಭೇದಿ ಕಾಣಿಸಿತು. ಆದರೆ, ಆಸ್ಪತ್ರೆಗೆ ಹೋಗಲು ಅವರು ಇಷ್ಟಪಡಲಿಲ್ಲ. ಇಂದು ಬೆಳಿಗ್ಗೆ 6 ಗಂಟೆಗೆ ಅವರನ್ನು ಎಬ್ಬಿಸಲು ಹೋದಾಗ ನಿಧನರಾಗಿದ್ದರು. ಹೃದಯ ಸ್ತಂಭನದಿಂದಾಗಿ ನಿನ್ನೆ ರಾತ್ರಿ ನಿದ್ರೆಯಲ್ಲಿಯೇ ಅವರು ನಿಧನರಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಜಾನ್ವಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಬಳಿಕ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮುಂಬೈನ ಕೂಪರ್ ಆಸ್ಪತ್ರೆಗೆ ರವಾನಿಸಿದ್ದು, ಮುಂಬೈನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು. ವಿಕಾಸ್ ಸೇಥಿ ಅವರು ಪತ್ನಿ ಮತ್ತು ಅವಳಿ ಪುತ್ರರನ್ನು ಅಗಲಿದ್ದಾರೆ.
Advertisement