
ಕಳೆದ ಕೆಲವು ದಿನಗಳಿಂದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಚಾಹಲ್ ಅಥವಾ ಧನಶ್ರೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಡಿವೋರ್ಸ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ದಿನದಿಂದ ದಿನಕ್ಕೆ ವದಂತಿಗಳು ಹರಡುತ್ತಲೇ ಇದ್ದು, ಇದೀಗ ಹೊಸ ವಿಚಾರವೊಂದು ಸಾಕಷ್ಟು ಸುದ್ದಿಯಲ್ಲಿದೆ. ಈ ನಡುವೆ ಚಾಹಲ್ ಅವರು ಧನಶ್ರೀ ವರ್ಮಾ ಅವರಿಗೆ 60 ಕೋಟಿ ರೂ. ಜೀವನಾಂಶ ನೀಡಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಸಾಮಾಜಿಕ ಮಾಧ್ಯಮದ ಊಹಾಪೋಹಗಳ ಪ್ರಕಾರ, ವಿಚ್ಛೇದನಕ್ಕಾಗಿ ಕ್ರಿಕೆಟಿಗ ಚಾಹಲ್ ಅವರು ಧನಶ್ರೀ ವರ್ಮಾಗೆ ₹ 60 ಕೋಟಿ ಜೀವನಾಂಶ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ಆದರೆ, ಇದು ನಿಜವೇ ಅಥವಾ ವದಂತಿಯೇ ಎಂಬುದನ್ನು ಈವರೆಗೆ ಇಬ್ಬರಲ್ಲಿ ಯಾರೊಬ್ಬರು ಸ್ಪಷ್ಟಪಡಿಸಿಲ್ಲ.
ಸದ್ಯ ದಂಪತಿ ಇನ್ನೂ ವಿಚ್ಛೇದನ ಪಡೆದಿಲ್ಲದ ಕಾರಣ ಜೀವನಾಂಶದ ಕುರಿತಾದ ಯಾವುದೇ ಸುದ್ದಿಗಳು ನಿಜವಲ್ಲ ಎನ್ನಲಾಗಿದೆ.
ವರದಿಗಳ ಪ್ರಕಾರ, ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದರು. ಚಾಹಲ್ ಅವರು ಧನಶ್ರೀ ಅವರೊಂದಿಗಿದ್ದ ಎಲ್ಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿರುವುದು ಮತ್ತು ಧನಶ್ರೀ ಅವರು ತಮ್ಮ ಹೆಸರಿನ ಮುಂದಿದ್ದ ಚಾಹಲ್ ಎನ್ನುವುದನ್ನು ತೆಗೆದುಹಾಕಿದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಮುಂದುವರಿದು ದಂಪತಿ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ವದಂತಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ದಟ್ಟವಾಗಿ ಹರಡಿದ್ದವು. ಹೀಗಿದ್ದರೂ, ಧನಶ್ರೀ ಅವರು ಚಾಹಲ್ ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಗೆಯೇ ಉಳಿಸಿಕೊಂಡಿದ್ದು, ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ.
ಜನವರಿಯಲ್ಲಿ ಈ ಕುರಿತು ಯುಜ್ವೇಂದ್ರ ಚಹಾಲ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೌನ ಮುರಿದಿದ್ದರು. ಇಲ್ಲಿದಿರುವ ವಿಚಾರಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಊಹಾಪೋಹಗಳನ್ನು ಹರಡುತ್ತಿವೆ. 'ಒಬ್ಬ ಮಗ, ಸಹೋದರ ಮತ್ತು ಸ್ನೇಹಿತನಾಗಿ, ಈ ಊಹಾಪೋಹಗಳಲ್ಲಿ ಪಾಲ್ಗೊಳ್ಳದಂತೆ ನಾನು ಎಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ಏಕೆಂದರೆ, ಅವು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟುಮಾಡಿವೆ' ಎಂದಿದ್ದರು.
ಧನಶ್ರೀ ವರ್ಮಾ ಕೂಡ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, 'ಕಳೆದ ಕೆಲವು ದಿನಗಳು ನನ್ನ ಕುಟುಂಬ ಮತ್ತು ನನಗೆ ತುಂಬಾ ಕಠಿಣವಾಗಿ ಪರಿಣಮಿಸಿವೆ. ನಿರಾಧಾರ ಬರವಣಿಗೆ, ಸತ್ಯವನ್ನು ಪರಿಶೀಲಿಸದಿರುವುದು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ' ಎಂದು ಬರೆದಿದ್ದರು.
ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ 2020ರ ಡಿಸೆಂಬರ್ ತಿಂಗಳಲ್ಲಿ ಗುರುಗ್ರಾಂದಲ್ಲಿ ನಡೆದ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.
Advertisement