
ಮುಂಬೈ: ಬಾಲಿವುಡ್‌ನ ಖ್ಯಾತ ಹಾಸ್ಯನಟರಾದ ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್, ಸುಗಂಧಾ ಮಿಶ್ರಾ ಮತ್ತು ನೃತ್ಯ ನಿರ್ದೇಶಕರಾದ ರೆಮೋ ಡಿಸೋಜಾ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ವಿಷ್ಣು ಎಂಬ ವ್ಯಕ್ತಿಯಿಂದ ರಾಜ್‌ಪಾಲ್ ಯಾದವ್ ಅವರ ಇಮೇಲ್ ಖಾತೆಗೆ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಅದರಲ್ಲಿ, ಕಪಿಲ್ ಶರ್ಮಾ, ಅವರ ಕುಟುಂಬ, ಅವರ ಸಹಚರರು ಮತ್ತು ರಾಜ್‌ಪಾಲ್ ಯಾದವ್ ಅವರನ್ನು ಕೊಲ್ಲಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ.
2024ರ ಡಿಸೆಂಬರ್ 14 ರಂದು ಇಮೇಲ್ ಕಳುಹಿಸಲಾಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. don99284@gmail.com ಎಂಬ ಇಮೇಲ್ ವಿಳಾಸದಿಂದ ರಾಜ್‌ಪಾಲ್ ಯಾದವ್ ತಂಡದ ಇಮೇಲ್ ಖಾತೆ teamrajpalyadav@gmail.com ಗೆ ಬೆದರಿಕೆ ಸಂದೇಶ ಬಂದಿದೆ.
ಈ ಸಂಬಂಧ ಯಾದವ್ ಅವರ ಪತ್ನಿ ರಾಧಾ ರಾಜ್‌ಪಾಲ್ ಯಾದವ್ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಹಾಸ್ಯನಟ ಕಪಿಲ್ ಶರ್ಮಾ ಕೂಡ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಸುಗಂಧ ಮಿಶ್ರಾ ಮತ್ತು ರೆಮೋ ಡಿಸೋಜಾ ಕೂಡ ಇದೇ ಮೇಲ್ ಬಂದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಪಿಲ್ ಶರ್ಮಾ ಮತ್ತು ಅವರ ತಂಡಕ್ಕೆ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಕೈಗೊಂಡ ಅಂಬೋಲಿ ಪೊಲೀಸರಿಗೆ ಐಪಿ ವಿಳಾಸ ಪಾಕಿಸ್ತಾನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪಾಕಿಸ್ತಾನದೊಂದಿಗೆ ಪತ್ರವ್ಯವಹಾರ ನಡೆಸಲು ಸರ್ಕಾರದಿಂದ ಸಹಾಯ ಕೋರಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕಪಿಲ್ ಶರ್ಮಾ ಅವರು ಹಾಸ್ಯಗಾರನಾಗಿ ಹೆಸರಾಗಿದ್ದಾರೆ. ಹಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಹಾಸ್ಯಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ 3 ನಲ್ಲಿನ ವಿಜಯದೊಂದಿಗೆ ಅವರು ಮೊದಲಿಗೆ ಗಮನ ಸೆಳೆದರು ಮತ್ತು ಕಾಮಿಡಿ ಸರ್ಕಸ್‌ನಂತಹ ಹಿಟ್ ಹಾಸ್ಯ ಕಾರ್ಯಕ್ರಮಗಳಲ್ಲಿ ನಟಿಸಿದರು.
ಈಮಧ್ಯೆ, ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಬಹುಮುಖ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾದ ರಾಜ್‌ಪಾಲ್ ಯಾದವ್ ಅವರು ಕೊನೆಯದಾಗಿ 'ಭೂಲ್ ಭುಲೈಯಾ 3' ನಲ್ಲಿ ಕಾಣಿಸಿಕೊಂಡಿದ್ದರು. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಮತ್ತು ತೃಪ್ತಿ ದಿಮ್ರಿ ಮುಂತಾದವರು ನಟಿಸಿದ್ದಾರೆ.
Advertisement