
ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮಾಜಿ ಆಪ್ತ ಸಹಾಯಕಿಯನ್ನು ವಂಚನೆ ಆರೋಪದಲ್ಲಿ ಮುಂಬೈಯ ಜುಹು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟಿ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಹಣಕಾಸು ವ್ಯವಹಾರದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ 5 ತಿಂಗಳ ಹಿಂದೆ ನೀಡಿದ್ದ ದೂರಿನ ನಂತರ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆಲಿಯಾ ಭಟ್ ಅವರ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂಪಾಯಿ ಹಣಕಾಸು ವಂಚನೆ ಮಾಡಿರುವ ಆರೋಪದಲ್ಲಿ ಆಲಿಯಾರ ಮಾಜಿ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ (32ವ) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ವೇದಿಕಾ ಪ್ರಕಾಶ್ ಶೆಟ್ಟಿ, ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2022 ರಿಂದ 2024 ರ ಅವಧಿಯಲ್ಲಿ ವೇದಿಕಾ ಪ್ರಕಾಶ್ ಶೆಟ್ಟಿ ಅವರು ಆಲಿಯಾರ ಖಾಸಗಿ ಹಾಗೂ ಆಲಿಯಾರ ಎಟರ್ನಲ್ ಸನ್ಶೈನ್ ನಿರ್ಮಾಣ ಸಂಸ್ಥೆಗೆ 76.9 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಆಲಿಯಾ ಅವರ ಸಹಿಯನ್ನು ನಕಲು ಮಾಡಿ ತಾನು ಸಹಿ ಹಾಕಿ ಹಣಕಾಸು ವಂಚನೆ ಮಾಡುತ್ತಿದ್ದರು ಎಂದು ದೂರು ನೀಡಲಾಗಿತ್ತು.
2021 ರಿಂದ 2024ರ ವರೆಗೆ ವೇದಿಕಾ, ಆಲಿಯಾ ಭಟ್ ಅವರ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಇದೇ ಅವಧಿಯಲ್ಲಿ ಅವರು ಆಲಿಯಾ ಭಟ್ರ ಶೂಟಿಂಗ್ ಡೇಟ್ಸ್ ಮತ್ತು ಕೆಲ ಹಣಕಾಸು ದಾಖಲೆಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಜೊತೆಗೆ ಅವರ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ ಶೈನ್ ನ ಹಣಕಾಸು ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು.
ಘಟನೆ ಬೆಳಕಿಗೆ ಬರುತ್ತಲೇ ವೇದಿಕಾ ಪರಾರಿ ಆಗಿದ್ದು ಬೆಂಗಳೂರಿನಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸೋನಿ ರಜ್ದಾನ್ ಅವರು ದೂರು ನೀಡಿದ ಐದು ತಿಂಗಳ ಬಳಿಕ ಇತ್ತೀಚೆಗಷ್ಟೆ ವೇದಿಕಾರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಜುಲೈ 10ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ.
ಆಲಿಯಾ ಭಟ್ ಅವರು ತಮ್ಮ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ ಸಂಸ್ಥೆಯಿಂದ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಟನೆಯ ‘ಡಾರ್ಲಿಂಗ್ಸ್’, ‘ಜಿಗ್ರಾ’ ಸೇರಿದಂತೆ ಇನ್ನೂ ಕೆಲವಾರು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ‘ಲವ್ ಆಂಡ್ ವಾರ್’ ಮತ್ತು ಅಲ್ಫಾ ಚಿತ್ರಗಳಲ್ಲಿ ಪತಿ ರಣ್ಬೀರ್ ಕಪೂರ್ ಜೊತೆಗೆ ನಟಿಸುತ್ತಿದ್ದಾರೆ.
Advertisement