
ಆರ್‌ಜೆ ಮಹ್ವಾಶ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಜೊತೆ ಕಾಣಿಸಿಕೊಂಡಾಗಿನಿಂದ ಸಾಕಷ್ಟು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಈ ವರ್ಷ ಚಾಂಪಿಯನ್ಸ್ ಟ್ರೋಫಿ ವೇಳೆಯಲ್ಲಿ ಅವರು ಚಾಹಲ್ ಜೊತೆ ಕಾಣಿಸಿಕೊಂಡಿದ್ದರು ಮತ್ತು ನಂತರ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಸಮಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಬಲಿಸಿದ್ದರು. ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿ ಆಗಿರುವ ಮಹ್ವಾಶ್ ಈಗಾಗಲೇ 'ಸಿಂಗಲ್' ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರು ನಿರಂತರವಾಗಿ ಚಾಹಲ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ನಡುವಿನ ಡೇಟಿಂಗ್ ವದಂತಿಗಳಿಗೆ ಇಂಬು ನೀಡಿದೆ. ಇದರೊಂದಿಗೆ ಚಾಹಲ್ ಜೊತೆಗಿನ ಅವರ ಸಂಬಂಧದಿಂದಲೇ ಅವರ ವೃತ್ತಿಜೀವನ ಮೇಲೇರಲು ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
ಈ ಟ್ರೋಲ್‌ಗಳ ಬಗ್ಗೆ ಮಹ್ವಾಶ್ ಕೊನೆಗೂ ಮೌನ ಮುರಿದಿದ್ದು, ಪುರಾವೆಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಮಹ್ವಾಶ್ ತಮ್ಮ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮದಿಂದ ಹೇಗೆ ಪ್ರಗತಿ ಸಾಧಿಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.
ಆ ಪೋಸ್ಟ್‌ಗೆ 'ಜಬ್ ತಕ್ ಖುದ್ ಕೆ ಲಿಯೇ ನಹಿ ಬೊಲೋಗೆ, ಕೊಯಿ ತುಮ್ಹಾರೆ ಲಿಯೇ ನಹಿ ಬೊಲೇಗಾ' (ನೀವು ನಿಮಗಾಗಿ ಮಾತನಾಡದಿದ್ದರೆ, ಯಾರೂ ಮಾತನಾಡುವುದಿಲ್ಲ) ಎಂಬ ಶೀರ್ಷಿಕೆ ನೀಡಿದ್ದಾರೆ.
'ನಾನು 2019 ರಿಂದ ಈ ಉದ್ಯಮದಲ್ಲಿದ್ದೇನೆ. ಬನ್ನಿ, ಇದೆಲ್ಲದಕ್ಕೂ ಮೊದಲು ನಾನು ಏನು ಮಾಡಿದ್ದೇನೆಂದು ನಿಮಗೆ ತೋರಿಸುತ್ತೇನೆ' ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಬಳಿಕ ಒಂದೊಂದೆ ಕಮೆಂಟ್‌ಗೆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಯಾರೆಲ್ಲಾ ಇದ್ದರು ಮತ್ತು ಹೇಗೆ ಮುಂದೆ ಬಂದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಚಾಹಲ್ ಬರುವಿಕೆಗೂ ಮುನ್ನವೇ ಹಲವಾರು ಕ್ರಿಕೆಟಿಗರು ಮತ್ತು ಬಾಲಿವುಡ್ ನಟ-ನಟಿಯರೊಂದಿಗಿನ ತಮ್ಮ ಸಂಬಂಧದ ಕುರಿತು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ, ಮಹ್ವಾಶ್ ಪಾಡ್‌ಕ್ಯಾಸ್ಟ್‌ನಲ್ಲಿ, 'ನಾನು ಸಿಂಗಲ್ ಮತ್ತು ಇಂದಿನ ಕಾಲದಲ್ಲಿ ಮದುವೆಯ ಪರಿಕಲ್ಪನೆ ನನಗೆ ಅರ್ಥವಾಗುತ್ತಿಲ್ಲ. ಆದ್ದರಿಂದಲೇ ನಾನಿನ್ನು ಮದುವೆಯಾಗಿಲ್ಲ. ನಾನು ಮದುವೆಯಾಗಬೇಕು ಎನಿಸಿದಾಗ ಮಾತ್ರ ಡೇಟಿಂಗ್ ಮಾಡುತ್ತೇನೆ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ. ಏಕೆಂದರೆ, ನಾನು ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಮಾತ್ರ ಡೇಟಿಂಗ್ ಮಾಡುತ್ತೇನೆ' ಎಂದು ಹೇಳಿದ್ದರು.
'ನಾನು 19ನೇ ವಯಸ್ಸಿನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದೆ ಮತ್ತು ನಾನು ಅದನ್ನು 21ನೇ ವಯಸ್ಸಿನಲ್ಲಿ ರದ್ದುಗೊಳಿಸಿದೆ. ಅಲಿಗಢದಂತಹ ಸಣ್ಣ ಪಟ್ಟಣದಲ್ಲಿ ಬೆಳೆದ ನಮ್ಮ ಏಕೈಕ ಷರತ್ತು ಒಳ್ಳೆಯ ಗಂಡನನ್ನು ಹುಡುಕಬೇಕು ಮತ್ತು ಮದುವೆಯಾಗಬೇಕು ಎಂಬುದು. ಅದುವೇ ನಮ್ಮ ಗುರಿಯಾಗಿತ್ತು' ಎಂದು ಅವರು ಹೇಳಿದರು.
Advertisement