
ನವದೆಹಲಿ: ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಸಾವು ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ 10 ತಿಂಗಳ ಹಿಂದೆಯೇ ಆಕೆಯ ಸಾವಿನ ಕುರಿತು ಭವಿಷ್ಯ ನುಡಿದಿದ್ದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
42 ವರ್ಷದ ನಟಿ ಶೆಫಾಲಿ ಜರಿವಾಲಾ ಶುಕ್ರವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ಶೆಫಾಲಿ ಜರಿವಾಲಾ ಶುಕ್ರವಾರ ತಡರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಕೂಡಲೇ ಅವರ ಪತಿ ಪರಾಗ್ ತ್ಯಾಗಿ ನಟಿಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಆಕೆ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅಪಸ್ಮಾರ ರೋಗದ ಬಗ್ಗೆ ನಟಿ ಮಾತು
ಇದೇ ವಿಡಿಯೋದಲ್ಲಿ ನಟಿ ತಮ್ಮ ಅಪಸ್ಮಾರ ರೋಗ (epilepsy) ಬಗ್ಗೆಯೂ ಮಾತನಾಡಿದ್ದು, 'ಹದಿಹರೆಯದವಳಾಗಿದ್ದಾಗ ಅಪಸ್ಮಾರದಿಂದ ಬಳಲುತ್ತಿದ್ದೆ. ನಿರಂತರ ಚಿಕಿತ್ಸೆ, ಜೀವನಶೈಲಿ ಬದಲಾವಣೆಗಳು ಮತ್ತು ಧ್ಯಾನದಿಂದ ರೋಗ ಮುಕ್ತಳಾದೆ. 20 ವರ್ಷಗಳ ಬಳಿಕ ರೋಗ ಮುಕ್ತಳಾದೆ ಎಂದು ಹೇಳಿದ್ದಾರೆ.
"ನನಗೆ ಮೊದಲ ಬಾರಿಗೆ ಸೆಳೆತ ಕಾಣಿಸಿಕೊಂಡಿದ್ದು ಹತ್ತನೇ ತರಗತಿಯಲ್ಲಿದ್ದಾಗ. ಈ ನರವೈಜ್ಞಾನಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವ ಔಷಧಿಗಳಿವೆ. ನೀವು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಧ್ಯಾನ ಮತ್ತು ಯೋಗ ಸಹಾಯ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸುವುದು ಹೇಗೆ ಎಂದು ನೀವು ಕಲಿಯಬೇಕು. ಇಂದು, ನಾನು 20 ವರ್ಷಗಳಿಂದ ಅಪಸ್ಮಾರದಿಂದ ಮುಕ್ತನಾಗಿದ್ದೇನೆ ಮತ್ತು ನಾನು ಅದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇನೆ. ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕು, ಮತ್ತು ಅದನ್ನು ಗುಣಪಡಿಸಬಹುದು ಎಂದು ಹೇಳಿದರು.
10 ತಿಂಗಳ ಹಿಂದೆಯೇ ಸಾವಿನ ಭವಿಷ್ಯ
ಇನ್ನು ನಟಿಯ ದಿಢೀರ್ ಸಾವಿನ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅವರ ಹಳೆಯ ಪಾಡ್ ಕಾಸ್ಟ್ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಶೆಫಾಲಿ ಅವರು ಪರಾಸ್ ಛಾಬ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ನಟಿಯ ಸಾವಿನ ಕುರಿತು Paras Chhabra ಭವಿಷ್ಯ ನುಡಿದಿದ್ದಾರೆ. ವಿಡಿಯೋದಲ್ಲಿ ಶೆಫಾಲಿ ಅವರ "ಕುಂಡಲಿ" ಆಧಾರದ ಮೇಲೆ ಅವರ "ಹಠಾತ್ ಮರಣ"ದ ಬಗ್ಗೆ ಪರಾಸ್ ಛಾಬ್ರಾ ಸುಳಿವು ನೀಡುವುದನ್ನು ಕಾಣಬಹುದು.
ಪರಾಸ್ ಛಾಬ್ರಾ ಹೇಳಿದ್ದೇನು?
ಶೆಫಾಲಿ ಜರಿವಾಲಾ ಪಾಲ್ಗೊಂಡಿದ್ದ ಪರಾಸ್ ಛಾಬ್ರಾ ರ 'Abraa Ka Dabra Show' ನಲ್ಲಿ ಜಾತಕದ ಕುರಿತು ಮಾತನಾಡಿದ್ದು, ಈ ವೇಳೆ ಪರಾಸ್ ಚಾಬ್ರಾ 'ನಿಮ್ಮ ಜನ್ಮ ಕುಂಡಲಿಯ 8ನೇ ಮನೆಯಲ್ಲಿ ಚಂದ್ರ, ಬುದ್ಧ ಮತ್ತು ಕೇತು ಗ್ರಹಗಳು ಕುಳಿತಿವೆ. ಚಂದ್ರ ಮತ್ತು ಕೇತು ಗ್ರಹಗಳ ಸಂಯೋಜನೆ ತುಂಬಾ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. 8ನೇ ಮನೆ ನಷ್ಟ.. ಇದರ ಜೊತೆಗೆ ಬುಧ ಗ್ರಹ ಕೂಡ ಇದ್ದು.. ಇದು ಖ್ಯಾತಿ, ಗುಪ್ತ ರಹಸ್ಯಗಳು, ತಾಂತ್ರಿಕ ಸಂಬಂಧಿತ ವಿಷಯಗಳನ್ನು ಸಹ ಸೂಚಿಸುತ್ತದೆ. ಹಠಾತ್ ಸಾವು ಸಂಭವಿಸಬಹುದು. ಇದು ಆತಂಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಅಂದಹಾಗೆ ನಟಿ ಶೆಫಾಲಿ 2002 ರಲ್ಲಿ ಕಾಂಟಾ ಲಗಾ ಹಾಡಿನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿ ಗಳಿಸಿದರು. ನಂತರ ಬೂಗೀ ವೂಗೀ, ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13 ರಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಅವರು ಮನೆಮಾತಾದರು.
Advertisement