
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಹುನಿರೀಕ್ಷಿತ ಚಿತ್ರ 'ಸಿಕಂದರ್' ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಚಿತ್ರದ ಪ್ರಚಾರದ ಸಮಯದಲ್ಲಿ, ಸಲ್ಮಾನ್ 'ಸಿಕಂದರ್' ಸಿನಿಮಾ ಸುತ್ತ ಯಾವುದೇ ವಿವಾದಗಳು ಬೇಡ ಎಂದಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸಲ್ಮಾನ್, ಅವರ ಪ್ರತಿ ಚಿತ್ರ ಬಿಡುಗಡೆಯಾದಾಗಲೂ ವಿವಾದಗಳು ಟ್ರೆಂಡ್ ಆಗುತ್ತಿವೆಯೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದರು. 'ಸಿಕಂದರ್' ಸುತ್ತ ಯಾವುದೇ ವಿವಾದ ಬೇಡ ಎಂದು ಸ್ಪಷ್ಟಪಡಿಸಿದರು.
'ಹೇ ಸಹೋದರ, ನಮಗೆ ಯಾವುದೇ ವಿವಾದಗಳ ಅಗತ್ಯವಿಲ್ಲ. ನಾವು ಹಲವಾರು ವಿವಾದಗಳನ್ನು ಎದುರಿಸಿದ್ದೇವೆ. ನಮಗೆ ಯಾವುದೇ ವಿವಾದಗಳು ಈಗ ಅಗತ್ಯವಿಲ್ಲ. ವಿವಾದಗಳು ಸಿನಿಮಾವನ್ನು ಹಿಟ್ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ವಾಸ್ತವದಲ್ಲಿ, ಕೆಲವೊಮ್ಮೆ ವಿವಾದಗಳಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗುವುದನ್ನು ನಾವು ನೋಡಿದ್ದೇವೆ' ಎಂದರು.
'ಇನ್ನ ಮೂರ್ನಾಲ್ಕು ದಿನ ಕಳೆದರೆ ಸಿಕಂದರ್ ಚಿತ್ರ ಬಿಡುಗಡೆಯಾಗಲಿದೆ. ಹೀಗಿರುವಾಗ ಯಾವುದೇ ವಿವಾದದ ಅಗತ್ಯವಿಲ್ಲ. ಟ್ರೇಲರ್‌ನಲ್ಲಿ ನೋಡಿರುವುದಕ್ಕಿಂತ ಹೆಚ್ಚಿನದನ್ನು ಚಿತ್ರವು ಪ್ರೇಕ್ಷಕರಿಗೆ ನೀಡುತ್ತದೆ' ಎಂದು ಭರವಸೆ ನೀಡಿದರು.
'ಇದು ಕೇವಲ 3.5 ನಿಮಿಷಗಳ ಟ್ರೇಲರ್. ನೀವು 2 ಗಂಟೆ 25 ನಿಮಿಷಗಳ ಚಿತ್ರವನ್ನು ನೋಡಿದಾಗ, ಈ ಟ್ರೇಲರ್ ಏನೇನೂ ಅಲ್ಲ ಎಂದು ನಿಮಗೆ ಅರ್ಥವಾಗುತ್ತದೆ. ನಾವು ಟ್ರೇಲರ್‌ನಲ್ಲಿ ಎಲ್ಲವನ್ನೂ ಹಾಕಲು ಸಾಧ್ಯವಿಲ್ಲ. ಚಿತ್ರದಲ್ಲಿ ನಿಮಗೆ ಇಷ್ಟವಾಗುವ ಬಹಳಷ್ಟು ವಿಷಯಗಳಿವೆ... ಆ್ಯಕ್ಷನ್ ಚಿತ್ರಕ್ಕೆ, ಭಾವನೆಗಳು ಬಹಳ ಮುಖ್ಯ...' ಎಂದು ಅವರು ಹೇಳಿದರು.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಗಜನಿ ಮತ್ತು ತುಪ್ಪಕ್ಕಿಯಂತಹ ತಮಿಳು ಮತ್ತು ಹಿಂದಿ ಬ್ಲಾಕ್‌ಬಸ್ಟರ್‌ಗಳಿಗೆ ಹೆಸರುವಾಸಿಯಾದ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. 2014ರ ಬ್ಲಾಕ್‌ಬಸ್ಟರ್ 'ಕಿಕ್' ನಂತರ ಸಲ್ಮಾನ್ ಅವರೊಂದಿಗೆ ಮತ್ತೆ ಒಂದಾಗುತ್ತಿರುವ ಸಾಜಿದ್ ನಾಡಿಯಾಡ್‌ವಾಲಾ ಚಿತ್ರವನ್ನು ನಿರ್ಮಿಸಿದ್ದಾರೆ.
'ಸಿಕಂದರ್' ಮಾರ್ಚ್ 30 ರಂದು ಬಿಡುಗಡೆಯಾಗಲಿದೆ.
Advertisement