
ನವದೆಹಲಿ: ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಹಾರರ್ ಕಾಮಿಡಿ ಚಿತ್ರ 'ಥಾಮಾ' ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 25.11 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಣ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಬುಧವಾರ ಪ್ರಕಟಿಸಿದೆ.
ಥಾಮಾ ಚಿತ್ರವು ಮಂಗಳವಾರ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮ್ಯಾಡಾಕ್ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಮಾಹಿತಿ ನೀಡಿದೆ.
'ಬಾಕ್ಸ್ ಆಫೀಸ್ ಥಾಮಾದಿಂದ ತುಂಬಿದೆ! ಈ ರೋಮಾಂಚನ ನಿಜ' ಎಂದು ಸ್ಟುಡಿಯೋ ಬರೆದಿದ್ದು, ಪೋಸ್ಟರ್‌ನಲ್ಲಿ ಚಿತ್ರವು ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲಿ 25.11 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ.
ಚಿತ್ರದಲ್ಲಿ ಪತ್ರಕರ್ತ ಅಲೋಕ್ ಗೋಯಲ್ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ್ದು, ತಡಕಾ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಯಕ್ಷಸನ್ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಅಲೋಕ್‌ನ ಪೋಷಕರ ಪಾತ್ರದಲ್ಲಿ ಪರೇಶ್ ರಾವಲ್ ಮತ್ತು ಗೀತಾ ಅಗರ್ವಾಲ್ ಶರ್ಮಾ ಕೂಡ ನಟಿಸಿದ್ದಾರೆ.
'ಥಾಮಾ' ಚಿತ್ರವನ್ನು 'ಮುಂಜ್ಯ' ಖ್ಯಾತಿಯ ಆದಿತ್ಯ ಸರ್ಪೋತ್ದಾರ್ ನಿರ್ದೇಶಿಸಿದ್ದಾರೆ ಮತ್ತು ನಿರೇನ್ ಭಟ್, ಸುರೇಶ್ ಮ್ಯಾಥ್ಯೂ ಮತ್ತು ಅರುಣ್ ಫಲಾರ ಬರೆದಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್‌ನ ಮುಖ್ಯಸ್ಥ ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಸ್ತ್ರೀ', 'ಭೇಡಿಯಾ', 'ಮುಂಜ್ಯ' ಮತ್ತು 'ಸ್ತ್ರೀ 2' ನಂತರ ಫ್ರಾಂಚೈಸಿಯ ಐದನೇ ಚಿತ್ರ ಇದಾಗಿದೆ.
Advertisement