
ಮುಂಬೈ: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪುತ್ರಿ ದುವಾಗೆ ಇದೀಗ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ನಟಿ ದೀಪಿಕಾ ಮನೆಯಲ್ಲಿ ತಾವೇ ಕೇಕ್ ತಯಾರಿಸುವ ಮೂಲಕ ತನ್ನ ಪುಟ್ಟ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
2024ರ ಸೆಪ್ಟೆಂಬರ್ 8 ರಂದು ದುವಾ ಜನಿಸಿದ್ದು, ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವೇ ತಯಾರಿಸಿದ ಚಾಕೊಲೇಟ್ ಕೇಕ್‌ನ ಸರಳ ಆದರೆ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜೊತೆಗೆ, 'ನನ್ನ ಪ್ರೀತಿಯ ಭಾಷೆ? ನನ್ನ ಮಗಳ ಮೊದಲ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದೇನೆ!' ಎಂದು ಬರೆದಿದ್ದಾರೆ.
ಕೂಡಲೇ ಅಭಿಮಾನಿಗಳು ದುವಾಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 'ನನ್ನ ಪುಟ್ಟ ದುವಾಗೆ ತುಂಬಾ ಪ್ರೀತಿ' ಎಂದು ಒಬ್ಬರು ಬರೆದರೆ, ಮತ್ತೊಬ್ಬರು, 'ಈಗಾಗಲೇ ಒಂದು ವರ್ಷವಾಗಿದೆಯೇ?' ಎಂದು ಪ್ರಶ್ನಿಸಿದ್ದಾರೆ.
2018ರಲ್ಲಿ ವಿವಾಹವಾದ ದೀಪಿಕಾ ಮತ್ತು ರಣವೀರ್ ಕಳೆದ ವರ್ಷ ದೀಪಾವಳಿಯ ಸಮಯದಲ್ಲಿ ತಮ್ಮ ಮಗಳ ಹೆಸರನ್ನು ಘೋಷಿಸಿದರು. 'ದುವಾ: ಅಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ' ಎಂದಿದ್ದಾರೆ. ಇದುವರೆಗೂ ದುವಾಳನ್ನು ಜಗತ್ತಿಗೆ ತೋರಿಸಿಲ್ಲ. ದಂಪತಿ ಒಮ್ಮೆ ಪಾಪರಾಜಿಗಳು ತಮ್ಮ ಮಗಳನ್ನು ಭೇಟಿಯಾಗಲು ಆಹ್ವಾನಿಸಿದರೂ, ಆಕೆಯ ಚಿತ್ರಗಳನ್ನು ಎಲ್ಲಿಯೂ ಪ್ರಸಾರ ಮಾಡದಂತೆ ತಡೆಹಿಡಿದಿದ್ದಾರೆ.
ದೀಪಿಕಾ ಸದ್ಯ ನಿರ್ದೇಶಕ ಅಟ್ಲೀ ಅವರ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಚಿತ್ರಕ್ಕೆ AA22 x A6 ಎಂದು ಹೆಸರಿಸಲಾಗಿದ್ದು, ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ದೀಪಿಕಾ ಇದೇ ಮೊದಲ ಬಾರಿಗೆ ನಟ ಅಲ್ಲು ಅರ್ಜುನ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಟ್ಲೀ ನಿರ್ದೇಶನದ ಶಾರುಖ್ ಖಾನ್ ನಟಿಸಿದ್ದ 'ಜವಾನ್' ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು.
ಇತ್ತ ರಣವೀರ್ ಸಿಂಗ್, ಆದಿತ್ಯ ಧರ್ ಅವರ ಮುಂಬರುವ ಚಿತ್ರ ಧುರಂಧರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಚಿತ್ರವು ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.
Advertisement