

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಒಂದು ವಾರದೊಳಗೆ, ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರವು 1000 ಕೋಟಿ ರೂಪಾಯಿಗಳ ಕ್ಲಬ್ಗೆ ಸೇರ್ಪಡೆಗೊಂಡಿದೆ. ರಣಬೀರ್ ಕಪೂರ್ ಮತ್ತು ಯಶ್ ನಟಿಸಿರುವ ಈ ಚಿತ್ರವು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿನ ಭರ್ಜರಿ ಪ್ರದರ್ಶನ ಹಾಗೂ ನಂತರದ ದಿನಗಳಲ್ಲಿ ದಾಖಲೆ ಮಟ್ಟದ ಗಳಿಕೆಯೊಂದಿಗೆ ಇಂದು ಜಾಗತಿಕ ಮಟ್ಟದಲ್ಲಿ 1000 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 1000 ಕೋಟಿ ರೂಪಾಯಿಗಳ ಮೈಲಿಗಲ್ಲನ್ನು ತಲುಪಿದ ಮೂರನೇ ಭಾರತೀಯ ಚಲನಚಿತ್ರ 'ರಾಮಾಯಣ'ವಾಗಿದ್ದು, ಈ ಸಾಧನೆಯನ್ನು ಅತ್ಯಂತ ವೇಗವಾಗಿ ತಲುಪಿದ ಮೂರನೇ ಚಿತ್ರವೂ ಇದಾಗಿದೆ.
ದೀಪಾವಳಿಗೆ ಮೂರು ದಿನಗಳ ಮೊದಲು, ನವೆಂಬರ್ 5ರಂದು 'ರಾಮಾಯಣ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಮೊದಲ ದಿನ ಜಾಗತಿಕ ಮಟ್ಟದಲ್ಲಿ 128 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ, ಚಿತ್ರವು ಉತ್ತಮ ಆರಂಭವನ್ನು ಪಡೆಯಿತು. ಚಿತ್ರದ ಬಗ್ಗೆ ವ್ಯಕ್ತವಾದ ಸಕಾರಾತ್ಮಕ ವಿಮರ್ಶೆಗಳು ಮತ್ತು ಪ್ರತಿಕ್ರಿಯೆಗಳು, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಿತ್ತು. ಇದು ವಿದೇಶಗಳಲ್ಲಿ ಚಿತ್ರದ ಗಳಿಕೆ ಹೆಚ್ಚಾಗಲು ನೆರವಾಯಿತು. ಆದಾಗ್ಯೂ, ಭಾರತದಲ್ಲಿ ದೀಪಾವಳಿ ಹಬ್ಬದ ಆಚರಣೆಗಳ ಕಾರಣದಿಂದಾಗಿ ಚಿತ್ರದ ಗಳಿಕೆಯ ಮೇಲೆ ಸ್ವಲ್ಪ ಪರಿಣಾಮ ಉಂಟಾಯಿತು. ಏನೇ ಇದ್ದರೂ, ಬಿಡುಗಡೆಯಾದ ಮೊದಲ ನಾಲ್ಕು ದಿನಗಳ ವಾರಾಂತ್ಯದಲ್ಲಿ 'ರಾಮಾಯಣ' 507 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
ಕಳೆದ ಸೋಮವಾರ ಗೋವರ್ಧನ ಪೂಜೆ ಮತ್ತು ಭಾಯ್ ದೂಜ್ ರಜಾದಿನದ ಲಾಭ ಪಡೆದುಕೊಂಡ ಈ ಚಿತ್ರ 150 ಕೋಟಿಗೂ ಹೆಚ್ಚು ಗಳಿಕೆ ದಾಖಲಿಸಿತು. ಬುಧವಾರದಂದು ಅತ್ಯಂತ ಬಲವಾದ ಪ್ರದರ್ಶನ ನೀಡುವ ಮೂಲಕ 'ರಾಮಾಯಣ' ಈ ಓಟವನ್ನು ಮುಂದುವರಿಸಿತು. ಏಳು ದಿನಗಳಲ್ಲಿ ಒಟ್ಟು 935 ಕೋಟಿ ಗಳಿಸಿತು. ಇದರೊಂದಿಗೆ ಚಿತ್ರದ ಎಂಟು ದಿನಗಳ ವಿಸ್ತೃತ ಆರಂಭಿಕ ವಾರವು ಮುಕ್ತಾಯಗೊಂಡಿತು. ಗುರುವಾರಕ್ಕಾಗಿ ಭಾರತದಲ್ಲಿ ಮುಂಗಡ ಬುಕಿಂಗ್ಗಳ ಮೂಲಕ 33 ಕೋಟಿ ಮತ್ತು ವಿದೇಶಗಳಲ್ಲಿ ಸುಮಾರು 1.5 ಮಿಲಿಯನ್ (ಸುಮಾರು 12.5 ಕೋಟಿ) ಗಳಿಕೆಯೊಂದಿಗೆ, ಗುರುವಾರ ಆರಂಭವಾಗುವ ಹೊತ್ತಿಗೆ ಚಿತ್ರದ ಒಟ್ಟು ಗಳಿಕೆ ಸುಮಾರು 980 ಕೋಟಿಗೆ ತಲುಪಿತು.
ವ್ಯಾಪಾರ ವಲಯದ ಅಂದಾಜಿನ ಪ್ರಕಾರ, ಗುರುವಾರ ಮಧ್ಯಾಹ್ನದ ನಂತರ ನಡೆದ 'ಸ್ಪಾಟ್ ಬುಕಿಂಗ್'ಗಳ (ನೇರ ಟಿಕೆಟ್ ಖರೀದಿ) ನೆರವಿನಿಂದ 'ರಾಮಾಯಣ' 1000 ಕೋಟಿ ಗಡಿಯನ್ನು ದಾಟಿತು. ಹೀಗೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟನೇ ದಿನವೇ ಈ ಚಿತ್ರವು 1000 ಕೋಟಿ ಕ್ಲಬ್ಗೆ ಸೇರ್ಪಡೆಗೊಂಡಿತು. ಇನ್ನು ಕರ್ನಾಟಕದಲ್ಲಿ ರಾಮಾಯಣ ಚಿತ್ರ ಬರೋಬ್ಬರಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕನ್ನಡದ ಡಬ್ ಆವೃತ್ತಿಯೂ 45 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದರೇ, ಹಿಂದಿ ಸೇರಿದಂತೆ ಇತರ ಆವೃತ್ತಿಯ ಚಿತ್ರಗಳೂ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.