

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಚಿತ್ರದ ಗಳಿಕೆ 849ಕೋಟಿಗೇರಿದೆ.
ಈ ಕುರಿತು ಇಟ್ಸ್ ಸಿನಿಮಾ ವರದಿ ಮಾಡಿದ್ದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ದಾಖಲೆಯ ಗಳಿಕೆ ಕಂಡಿದ್ದ ಚಿತ್ರ, ಆರನೇ ದಿನವಾದ ಮಂಗಳವಾರವೂ ಉತ್ತಮ ಕಲೆಕ್ಷನ್ ಮಾಡಿದೆ.
ಕೇವಲ ಆರು ದಿನಗಳಲ್ಲಿ ಭಾರತದಲ್ಲಿ ₹440.45 ಕೋಟಿ ನಿವ್ವಳ ಗಳಿಕೆ ಮಾಡಿರುವ ಸಿನಿಮಾ, ವಿಶ್ವಾದ್ಯಂತ ಒಟ್ಟು ₹849 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ.
6 ದಿನಕ್ಕೆ ₹849 ಕೋಟಿ ಗಳಿಕೆ
ಸಿನಿಮಾ ಕಲೆಕ್ಷನ್ ಮಾಹಿತಿಯನ್ನು ನೀಡುವ ಸ್ಯಾಕ್ನಿಲ್ಕ್ (Sacnilk) ವರದಿ ಪ್ರಕಾರ, ಆರನೇ ದಿನವಾದ ಮಂಗಳವಾರ ಭಾರತದಲ್ಲಿ 24,344 ಪ್ರದರ್ಶನಗಳಿಂದ ₹94.10 ಕೋಟಿ ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ದೇಶೀಯ ಒಟ್ಟು ನಿವ್ವಳ ಗಳಿಕೆ ₹440.45 ಕೋಟಿಗೆ ತಲುಪಿದೆ.
ತೆರಿಗೆ ಸೇರಿ ಒಟ್ಟು ಗಳಿಕೆ ₹526.50 ಕೋಟಿ ಆಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಆರನೇ ದಿನ ₹35 ಕೋಟಿ ಗಳಿಸಿದ್ದು, ಒಟ್ಟು ವಿದೇಶಿ ಗಳಿಕೆ ₹297 ಕೋಟಿಗೆ ತಲುಪಿದೆ. ಹೀಗಾಗಿ ವಿಶ್ವಾದ್ಯಂತ ಚಿತ್ರದ ಒಟ್ಟು ಗಳಿಕೆ ₹849 ಕೋಟಿ ಆಗಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲೂ ದಾಖಲೆ
ಇನ್ನು ಕರ್ನಾಟಕದಲ್ಲಿ ಮೊದಲ ದಿನ 15.2 ಕೋಟಿ ರೂ ಗಳಿಸಿದ್ದ ಚಿತ್ರ, 2ನೇ ದಿನ 10.1 ಕೋಟಿ, 3ನೇ ದಿನ 14.7 ಕೋಟಿ, 4ನೇ ದಿನ 16.1 ಕೋಟಿ, 5ನೇ ದಿನ 16.8 ಕೋಟಿ ರೂ ಮತ್ತು 6ನೇ ದಿನ 17 ಕೋಟಿ ರೂ ಗಳಿಕೆ ಮಾಡಿದೆ. ಆ ಮೂಲಕ ಕರ್ನಾಟಕದಲ್ಲಿ ಚಿತ್ರದ ಗಳಿಕ 89.9 ಕೋಟಿ ರೂಗಳಿಗೆ ಏರಿಕೆಯಾಗಿದೆ. ಅಲ್ಲದೆ ಕರ್ನಾಟಕದಲ್ಲಿ ಮೊದಲ ಮಂಗಳವಾರ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಾಂತಾರ ದಾಖಲೆಗೂ ಕುತ್ತು
ಇದೇ ವೇಳೆ ರಾಮಾಯಣ ಚಿತ್ರ ಕಾಂತಾರ ಚಾಪ್ಟರ್ 1 ಚಿತ್ರದ ದಾಖಲೆಗೂ ಕುತ್ತು ತಂದಿದ್ದು, ಕರ್ನಾಟಕದಲ್ಲಿ ಸತತ 6 ದಿನಗಳ ಡಬಲ್ ಡಿಜಿಟ್ ಗಳಿಕೆ ಕಂಡ ಮೊದಲ ಚಿತ್ರ ಎಂಬ ದಾಖಲೆ ಬರೆದಿದೆ. ರಾಮಾಯಣ 6ನೇ ದಿನ ಡಬಲ್ ಡಿಜಿಟ್ ಗಳಿಕೆ ಕಂಡು ಈ ದಾಖಲೆ ಸರಿಗಟ್ಟಿದ್ದು, ನಾಳೆಯೂ ಇದೇ ರೀತಿ ಕಲೆಕ್ಷನ್ ಕಂಡರೆ ಈ ದಾಖಲೆಯನ್ನೂ ಅಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹಿಂದಿ ಕಲೆಕ್ಷನ್‌ನಲ್ಲಿ ಜವಾನ್ ದಾಖಲೆ ಸರಿಗಟ್ಟಿದ ರಾಮಾಯಣ
ಹಿಂದಿ ಆವೃತ್ತಿಯ ಗಳಿಕೆಯಲ್ಲಿ 'ರಾಮಾಯಣ' ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಹಿಂದಿಯಲ್ಲಿ ₹336 ಕೋಟಿ ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ಹಿಂದಿ ಆವೃತ್ತಿಯಲ್ಲಿ ಅತಿ ವೇಗವಾಗಿ ₹300 ಕೋಟಿ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಕೂಡ ಬಿಡುಗಡೆಯಾದ ಆರು ದಿನಗಳಲ್ಲಿ ಹಿಂದಿ ಆವೃತ್ತಿಯಲ್ಲಿ ₹306.58 ಕೋಟಿ ಗಳಿಸಿತ್ತು. ಇದೀಗ 'ರಾಮಾಯಣ' ಕೂಡ ಅಷ್ಟೇ ವೇಗದಲ್ಲಿ ₹300 ಕೋಟಿ ಗಡಿ ದಾಟಿ ಜವಾನ್ ದಾಖಲೆಯನ್ನು ಸರಿಗಟ್ಟಿದೆ.
ಆದರೆ, 'ಧುರಂಧರ್ 2' ಕೇವಲ ಮೂರು ದಿನಗಳಲ್ಲಿ ಹಾಗೂ 'ಪುಷ್ಪ 2' ಐದು ದಿನಗಳಲ್ಲಿ ಹಿಂದಿ ಆವೃತ್ತಿಯಲ್ಲಿ ₹300 ಕೋಟಿ ನಿವ್ವಳ ಗಳಿಕೆ ಮಾಡಿ ಈ ಪಟ್ಟಿಯಲ್ಲಿ ಮುಂದಿವೆ.
ಐದನೇ ದಿನವಾದ ಸೋಮವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದೇ ದಿನ ₹107.50 ಕೋಟಿ ಗಳಿಸುವ ಮೂಲಕ ಇದುವರೆಗಿನ ಅತಿ ಹೆಚ್ಚು ಏಕದಿನ ಗಳಿಕೆಯನ್ನು ದಾಖಲಿಸಿತ್ತು.
₹4,000 ಕೋಟಿ ಬಜೆಟ್‌ನ ಸಿನಿಮಾ
ಸುಮಾರು ₹4,000 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ 'ರಾಮಾಯಣ' ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ರವಿ ದುಬೆ ಮತ್ತು ಲಾರಾ ದತ್ತಾ ಸೇರಿದಂತೆ ದೊಡ್ಡ ತಾರಾಗಣವಿದೆ.
ಚಿತ್ರದ ಪ್ರಚಾರವನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನಡೆಸಲಾಗಿತ್ತು. ಅಕ್ಟೋಬರ್ 27ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.