

ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ ಈ ಚಿತ್ರವನ್ನು ತಾವು ನೋಡಲ್ಲ ಎಂದು ಖ್ಯಾತ ಬಾಲಿವುಡ್ ನಟ ಮುಕೇಶ್ ಖನ್ನಾ ಹೇಳಿದ್ದಾರೆ.
ನಟ ಯಶ್ ರಾವಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮಾಯಣ ಚಿತ್ರದ ಪರ-ವಿರೋಧ ಚರ್ಚೆಗಳು ಜೋರಾಗಿದ್ದು, ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿರುವ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇದೀಗ ಹಿರಿಯ ನಟ ಮುಕೇಶ್ ಖನ್ನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿ.ಆರ್. ಚೋಪ್ರಾ ನಿರ್ದೇಶನದ 'ಮಹಾಭಾರತ' ಧಾರಾವಾಹಿಯಲ್ಲಿ ಭೀಷ್ಮ ಪಿತಾಮಹನ ಪಾತ್ರದ ಮೂಲಕ ಜನಪ್ರಿಯರಾಗಿರುವ ಮುಕೇಶ್ ಖನ್ನಾ, ತಾವು ಈವರೆಗೂ 'ರಾಮಾಯಣ' ಸಿನಿಮಾ ನೋಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ, ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವುದಿಲ್ಲ ಎಂದೂ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಮಾತನಾಡಿರುವ ಅವರು, ಚಿತ್ರದ ಕಥೆ ಮತ್ತು ನಿರೂಪಣೆಗಿಂತ ಅದರ ಬಜೆಟ್ ಹಾಗೂ ಹಣ ವಾಪಸ್ ಪಡೆಯುವ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'₹1,200 ಟಿಕೆಟ್ ಖರೀದಿಸಿ ಸಿನಿಮಾ ನೋಡಲ್ಲ'
"ರಾಮಾಯಣ ಸಿನಿಮಾ ಬಿಡುಗಡೆಯಾದಾಗಿನಿಂದ ದೇಶಾದ್ಯಂತ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳು, ಸುದ್ದಿ ವಾಹಿನಿಗಳು ಹಾಗೂ ಜನರು ತಮ್ಮದೇ ಆದ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಆದರೆ ಸಿನಿಮಾ ಎಷ್ಟು ಹಣ ಗಳಿಸುತ್ತದೆ ಎಂಬುದೇ ಈಗ ಪ್ರಮುಖ ಚರ್ಚೆಯಾಗಿದೆ.
ನಿರ್ಮಾಣಕ್ಕೆ ₹400 ಕೋಟಿ ಅಥವಾ ₹4,000 ಕೋಟಿ ಖರ್ಚು ಮಾಡಿದ್ದೇವೆ, ಅದನ್ನು ಹೇಗೆ ವಾಪಸ್ ಪಡೆಯುವುದು ಎಂಬುದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ರಾಮಾಯಣದ ಕಥೆಯನ್ನು ಸರಿಯಾಗಿ ತೋರಿಸಲಾಗಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿಲ್ಲ" ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.
ಅಲ್ಲದೆ, ಐಮ್ಯಾಕ್ಸ್‌ನಲ್ಲಿ ಚಿತ್ರದ ಟಿಕೆಟ್ ದರ ಸುಮಾರು ₹1,200 ಇದೆ. ಅಷ್ಟು ಹಣ ಕೊಟ್ಟು ಸಿನಿಮಾ ನೋಡಲು ತಮಗೆ ಆಸಕ್ತಿಯಿಲ್ಲ ಎಂದಿದ್ದಾರೆ.
"ನಾನು ಸಿನಿಮಾ ನೋಡಲು ಹೋದರೆ ನನ್ನ ಸಿಬ್ಬಂದಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ. ಹೀಗಾಗಿ ಇಷ್ಟೊಂದು ಹಣವನ್ನು ನಿರ್ಮಾಪಕರಿಗೆ ನೀಡಲು ಇಷ್ಟವಿಲ್ಲ. ನಮ್ಮಿಂದ ಹಣ ಗಳಿಸುವುದೇ ಉದ್ದೇಶವಾಗಿದ್ದು, ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದರೆ ಅಂತಹ ಚಿತ್ರಕ್ಕೆ ನನ್ನ ಹಣ ನೀಡಲು ಬಯಸುವುದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ" ಎಂದು ಹೇಳಿದ್ದಾರೆ.
'ವಾಲ್ಮೀಕಿ, ವ್ಯಾಸರಿಗಿಂತ ಎರಡು ಹೆಜ್ಜೆ ಮುಂದೆ ಇದ್ದಾರಾ?'
ಬಾಲ್ಯದಿಂದಲೂ ರಾಮಾಯಣದೊಂದಿಗೆ ತಮಗೆ ವಿಶೇಷ ನಂಟಿದೆ ಎಂದು ಹೇಳಿರುವ ಮುಕೇಶ್ ಖನ್ನಾ, ಚಿಕ್ಕವರಿದ್ದಾಗ ಮುಂಬೈನ ಕ್ರಾಸ್ ಮೈದಾನದಲ್ಲಿ ನಡೆಯುತ್ತಿದ್ದ ರಾಮಲೀಲಾ ಕಾರ್ಯಕ್ರಮಗಳನ್ನು ನೋಡುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ.
"ರಾಮಾಯಣ ನಮ್ಮ ರಕ್ತದ ಕಣಕಣದಲ್ಲಿದೆ. ನಾನು ಬಾಲ್ಯದಿಂದಲೂ ರಾಮಲೀಲಾ ನೋಡುತ್ತಾ ಬೆಳೆದಿದ್ದೇನೆ. ಸುಮಾರು 10-12 ವರ್ಷದವನಿದ್ದಾಗ ಮುಂಬೈನ ಕ್ರಾಸ್ ಮೈದಾನಕ್ಕೆ ಹೋಗಿ ರಾತ್ರಿ ಒಬ್ಬನೇ ಕುಳಿತು ರಾಮಲೀಲಾ ನೋಡುತ್ತಿದ್ದೆ. ಅಲ್ಲಿ ನೆರೆದಿದ್ದ ಎಲ್ಲರೂ ರಾಮಾಯಣದ ಕಥೆಯಲ್ಲಿ ಸಂಪೂರ್ಣವಾಗಿ ತಲ್ಲೀನರಾಗುತ್ತಿದ್ದರು" ಎಂದು ಹೇಳಿದ್ದಾರೆ.
ಇಂದಿನ ಕೆಲವು ಚಿತ್ರನಿರ್ಮಾಪಕರು ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳಿಗಿಂತ ತಾವೇ ಹೆಚ್ಚು ತಿಳಿದವರು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಿನಿಮಾ ನೋಡದೆಯೇ ವಿಮರ್ಶೆ!
ಮುಕೇಶ್ ಖನ್ನಾ ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತಾವು ಇನ್ನೂ ಚಿತ್ರಮಂದಿರದಲ್ಲಿ 'ರಾಮಾಯಣ' ಸಿನಿಮಾ ನೋಡಿಲ್ಲ. ಹೀಗಾಗಿ ತಮ್ಮ ಅಭಿಪ್ರಾಯವು ಚಿತ್ರದ ಪ್ರಚಾರ ವಿಡಿಯೋಗಳು, ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಇತರ ವಿಮರ್ಶೆಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.
"ನಾನು ಸಿನಿಮಾ ನೋಡಿಲ್ಲ. ಹಾಗಾಗಿ ಅದರ ಬಗ್ಗೆ ಮಾತನಾಡುವ ಹಕ್ಕು ನನಗಿಲ್ಲ ಎಂದು ಈ ಹಿಂದೆ ಹೇಳಿದ್ದೆ. ಆದರೆ ಸಿನಿಮಾ ಬಿಡುಗಡೆಯಾದ ನಂತರ ಕಳೆದ ನಾಲ್ಕೈದು ದಿನಗಳಿಂದ ಸಾಕಷ್ಟು ವಿಮರ್ಶೆಗಳನ್ನು ಕೇಳಿದ್ದೇನೆ. ನಿರ್ಮಾಪಕರು ಬಿಡುಗಡೆ ಮಾಡಿರುವ ಪ್ರಚಾರ ವಿಡಿಯೋಗಳನ್ನೂ ನೋಡಿದ್ದೇನೆ. ಇವೆಲ್ಲವನ್ನೂ ಆಧರಿಸಿ ನನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.
ಮುಂದೆ ಸಿನಿಮಾ ಪ್ರಿಂಟ್ ಸಿಕ್ಕರೆ ನೋಡಬಹುದು ಎಂದಿರುವ ಅವರು, ಸದ್ಯಕ್ಕೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ.
ಅಂದಹಾಗೆ ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ದುಬೆ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಹಾಗೂ ಕಾಜಲ್ ಅಗರ್ವಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.