

ಮುಂಬೈ (ಮಹಾರಾಷ್ಟ್ರ): ಬಾಲಿವುಡ್‌ನ ಭಾಯಿಜಾನ್ ಖ್ಯಾತಿಯ ಸಲ್ಮಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ, ಬಿಜೆಪಿಯೊಂದಿಗೆ ಮಾತ್ರವಲ್ಲದೆ, ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆಯ ಹಲವು ಪ್ರಮುಖ ನಾಯಕರೊಂದಿಗೂ ನಿಕಟ ಒಡನಾಟ ಹೊಂದಿದ್ದಾರೆ. ಅದರಂತೆ, ಈ ಹಿಂದೆ ತಮ್ಮ ಆಪ್ತ ಸ್ನೇಹಿತರು ಚುನಾವಣೆಗೆ ಸ್ಪರ್ಧಿಸಿದಾಗ ಅವರ ಪರವಾಗಿ ಪ್ರಚಾರ ಮಾಡಿದ್ದಾರೆಯೇ ಹೊರತು, ಎಂದಿಗೂ ಯಾವುದೇ ಪಕ್ಷದ ಬಾವುಟ ಹಿಡಿದು ರಾಜಕೀಯಕ್ಕೆ ಪ್ರವೇಶಿಸಿಲ್ಲ. ಆದರೆ, ಈಗ ಅದೇ ಸಲ್ಮಾನ್ ಖಾನ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಜೋರಾಗಿದೆ. ಆ ಕುರಿತ ವರದಿ ಇಲ್ಲಿದೆ:
ಕಮಲದ ಕೈ ಹಿಡಿಯುತ್ತಾರಾ ಭಾಯಿಜಾನ್?
ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಮುಂಬೈನ ತಮ್ಮ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ನಿವಾಸದಲ್ಲಿ, ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಖಜಾಂಚಿ ಪಿ.ಎಂ. ಸಾಯಿ ಪ್ರಸಾದ್ ಮತ್ತು ಅವರ ಪತ್ನಿ ರುಕ್ಮಿಣಿ ಚೌಧರಿ ಅವರಿಗೆ ಭೋಜನದ ಆತಿಥ್ಯ ನೀಡಿದ್ದಾರೆ. ಇದರೊಂದಿಗೆ, ಸಾಯಿ ಪ್ರಸಾದ್ ಅವರು ಸಲ್ಮಾನ್ ಖಾನ್ ಜೊತೆಗಿನ ಭೇಟಿಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಅವರ ಸರಳತೆ, ಆತ್ಮೀಯತೆ ಮತ್ತು ಅದ್ಭುತ ಆತಿಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದರ ಬೆನಲ್ಲೇ, ಸಲ್ಮಾನ್ ಖಾನ್ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದವು. ಆದರೆ, ಅಸಲಿ ಸತ್ಯ ಬೇರೆಯೇ ಇದೇ!
ಹೌದು, ಸಲ್ಮಾನ್ ಖಾನ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿರುವ ಬಗ್ಗೆ ಅಥವಾ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅದರಂತೆ, ಇದು ಕೇವಲ ಒಂದು ಸೌಜನ್ಯದ ಹಾಗೂ ಖಾಸಗಿ ಭೇಟಿಯಾಗಿದೆ. ಏತನ್ಮಧ್ಯೆ, ಇತ್ತೀಚೆಗೆ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಸೇರಿದಂತೆ ಹಲವು ನಾಯಕರು ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸಿದ್ದರು.