

ಗೋವಾದ ಪಣಜಿಯಲ್ಲಿ ಇಂದು ನಸುಕಿನ ಜಾವ ಹೃದಯಾಘಾತದಿಂದ ಬಾಲಿವುಡ್‌ನ ದಿಗ್ಗಜ ನಟ ನಾನಾ ಪಾಟೇಕರ್ ಹಠಾತ್ ನಿಧನರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗೋವಾಗೆ ತೆರಳಿದ್ದ ನಟ, ಅಕ್ಟೋಬರ್ 4ರಂದು ಡೊನಾ ಪೌಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಪದ್ಮಶ್ರೀ ಪುರಸ್ಕೃತ ನಟ ವಿಶ್ವನಾಥ್ ನಾನಾ ಪಾಟೇಕರ್ ಅವರು ಮೊನ್ನೆ ಭಾನುವಾರ ಡೊನಾ ಪೌಲಾದಲ್ಲಿರುವ ತಾಜ್ ಸಿಟಾಡೆ ಡಿ ಗೋವಾ ಹೊಟೇಲ್ ನಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್, ಸ್ಟೇಟ್-I ಘಟಕದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. 2026-27ನೇ ಸಾಲಿಗೆ ರಾಜಶ್ರೀ ಎ. ಖಾಂಡೆಪರ್ಕರ್ ಅವರನ್ನು ರಾಜ್ಯಾಧ್ಯಕ್ಷರಾಗಿ ಹಾಗೂ ಅವರ ನಿರ್ದೇಶಕರ ಮಂಡಳಿಯನ್ನು ಸಮಾರಂಭದಲ್ಲಿ ಪದಗ್ರಹಣ ಮಾಡಿಸಲಾಯಿತು.
ಸುದ್ದಿಸಂಸ್ಥೆ ಪಿಟಿಐ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಗೋವಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ನಾನಾ ಪಾಟೇಕರ್ ಮಾತನಾಡುತ್ತಿರುವ ದೃಶ್ಯ ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಅವರು ಬಿಳಿ ಕುರ್ತಾ ಮತ್ತು ಬಿಳಿ ಸ್ಕಾರ್ಫ್ ಧರಿಸಿದ್ದರು.
ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಸ್ಮರಿಸಿ, ಅವರ ರಾಜಕೀಯ ಕಾರ್ಯವೈಖರಿ ಮತ್ತು ಕೆಲಸ ಮಾಡುವ ಶೈಲಿಯನ್ನು ಶ್ಲಾಘಿಸಿದರು.
ನಾವೆಲ್ಲರೂ ಒಂದು ದಿನ ಹೋಗಲೇಬೇಕು. ನಾಳೆ ನಾನು ಇಲ್ಲಿರುತ್ತೇನೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಪ್ರತಿಯೊಬ್ಬರ ಜೀವನವೂ ಅಂತಿಮವಾಗಿ ಆ ಹಂತವನ್ನು ತಲುಪುತ್ತದೆ. ಆದರೆ ಅದು ಸಂಭವಿಸುವ ಮೊದಲು, ನಾನು ನನ್ನನ್ನೇ ಕೇಳಿಕೊಳ್ಳಬೇಕು: ನಾನು ಮಾಡಲು ಬಯಸಿದ್ದನ್ನು ಮಾಡಲು ನನಗೆ ಸಾಧ್ಯವಾಗುತ್ತಿದೆಯೇ ಎಂದು ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ನಾನಾ ಪಾಟೇಕರ್ ಮರಾಠಿಯಲ್ಲಿ ಹೇಳಿದ್ದರು.
1951ರ ಜನವರಿ 1ರಂದು ಮಹಾರಾಷ್ಟ್ರದಲ್ಲಿ ವಿಶ್ವನಾಥ್ ಪಾಟೇಕರ್ ಆಗಿ ಜನಿಸಿದ ನಾನಾ ಪಾಟೇಕರ್, ತಮ್ಮ ಪ್ರಭಾವಶಾಲಿ ಮತ್ತು ವಾಸ್ತವಿಕ ಅಭಿನಯಕ್ಕಾಗಿ ಜನಪ್ರಿಯರಾಗಿದ್ದರು. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಸಾಗಿದ ಅವರ ವೃತ್ತಿಜೀವನದಲ್ಲಿ, ವರ್ಷಗಳ ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಅವರು ನಿರ್ವಹಿಸಿದ್ದರು.
ಅವರ ವಿಶಿಷ್ಟ ಸಂಭಾಷಣೆ ಹೇಳುವ ಶೈಲಿ ತೀವ್ರತೆ ಮತ್ತು ವಿಭಿನ್ನತೆಯಿಂದ ಕೂಡಿತ್ತು. ಅವರ ಹಾವಭಾವ ಮತ್ತು ಸಂಭಾಷಣೆ ಹೇಳುವ ಶೈಲಿಯನ್ನು ಅನುಕರಿಸಲು ಸಾಧ್ಯವಾದರೆ ಅದು ಮಿಮಿಕ್ರಿ ಕಲಾವಿದರ ಪಾಲಿಗೆ ದೊಡ್ಡ ಸಾಧನೆಯೆಂದೇ ಪರಿಗಣಿಸಲಾಗುತ್ತಿತ್ತು.
1978ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಸಲಾಂ ಬಾಂಬೆ’ ಮತ್ತು ‘ಪರಿಂಧಾ’ ಚಿತ್ರಗಳು ಅವರಿಗೆ ದೊಡ್ಡ ತಿರುವು ನೀಡಿದವು. ಬಳಿಕ ‘ತಿರಂಗಾ’, ‘ಕ್ರಾಂತಿವೀರ್’, ‘ಖಾಮೋಶಿ: ದಿ ಮ್ಯೂಸಿಕಲ್’, ‘ಯಶವಂತ್’, ‘ಅಬ್ ತಕ್ ಛಪ್ಪನ್’, ‘ಅಪಹರಣ’ ಮತ್ತು ‘ರಾಜನೀತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಸ್ಮರಣೀಯ ಅಭಿನಯ ನೀಡಿದರು.
ನಾನಾ ಪಾಟೇಕರ್ ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲೂ ನಿರಂತರವಾಗಿ ಕೆಲಸ ಮಾಡಿದ್ದರು. ಬಳಿಕ ನಿರ್ದೇಶಕರಾಗಿಯೂ ತಮ್ಮ ಪ್ರತಿಭೆ ತೋರಿದ ಅವರು, 1991ರಲ್ಲಿ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.
ಗಂಭೀರ ಮತ್ತು ಆಕ್ರಮಣಕಾರಿ ಪಾತ್ರಗಳಲ್ಲಿ ನಾನಾ ಪಾಟೇಕರ್ ಅವರನ್ನು ನೋಡಿದ್ದ ಪ್ರೇಕ್ಷಕರಿಗೆ ‘ವೆಲ್‌ಕಮ್’ ಸರಣಿಯಲ್ಲಿ ಅವರು ನಿರ್ವಹಿಸಿದ ‘ಉದಯ್ ಶೆಟ್ಟಿ’ ಪಾತ್ರ ಅಚ್ಚರಿ ಮೂಡಿಸಿತ್ತು. ಈ ಪಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಮೀಮ್‌ಗಳಾಗಿ ಬಳಕೆಯಾಗುವಷ್ಟು ಜನಪ್ರಿಯವಾಯಿತು.
ಚಿತ್ರರಂಗ ಮತ್ತು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನಾನಾ ಪಾಟೇಕರ್ ಅವರಿಗೆ 2013ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರು.
ಸಾಮಾಜಿಕ ಸೇವೆ ಮತ್ತು ವಿವಿಧ ಸಾಮಾಜಿಕ ಕಾರ್ಯಗಳಿಗೆ ನಾನಾ ಪಾಟೇಕರ್ ಅವರು ತೊಡಗಿಸಿಕೊಂಡಿದ್ದರು. ರೈತರಿಗೆ ನೆರವು ನೀಡುವ ಕಾರ್ಯದಲ್ಲೂ ಅವರು ಸಕ್ರಿಯರಾಗಿದ್ದರು. ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಅವರು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಅವರ ಎನ್‌ಜಿಒ ಮೂಲಕ ಅಂತಹ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.