

ನಟ ಟೈಗರ್ ಶ್ರಾಫ್ ಮೇಲಿನ ದಾಳಿಯ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಕ್ಷಮೆಯಾಚಿಸುವಂತೆ ಮತ್ತು ಈ ವಿವಾದಕ್ಕೆ ಅಂತ್ಯ ಹಾಡುವಂತೆ ಜೋಧ್‌ಪುರದ ಬಿಷ್ಣೋಯಿ ಸಮುದಾಯದ ಮುಖಂಡ ದೇವೇಂದ್ರ ಬುಡಿಯಾ ಆಗ್ರಹಿಸಿದ್ದಾರೆ. ಒಂದು ಸಮುದಾಯದ ಬಳಿ ಕ್ಷಮೆ ಕೇಳುವುದರಿಂದ ವ್ಯಕ್ತಿಯ ಘನತೆ ಕಡಿಮೆಯಾಗುವುದಿಲ್ಲ. ಸಲ್ಮಾನ್ ಖಾನ್ ಸ್ವತಃ ಮುಂದೆ ಬಂದು ಈ ಇಡೀ ವಿಷಯಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
'ಎಎನ್‌ಐ' (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವೇಂದ್ರ ಬುಡಿಯಾ, ಸುಮಾರು ಒಂದೂವರೆ ವರ್ಷದ ಹಿಂದೆಯೇ ಈ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಬುದ್ಧಿಹೇಳಲು ಪ್ರಯತ್ನಿಸಿದ್ದಾಗಿ ತಿಳಿಸಿದರು. ಸಲ್ಮಾನ್ ಖಾನ್ ಒಬ್ಬ ಸೂಪರ್‌ಸ್ಟಾರ್ ಆಗಿರುವುದರಿಂದ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ತಾವು ಸಲಹೆ ನೀಡಿದ್ದಾಗಿ ಅವರು ಹೇಳಿದರು.
"ಸಲ್ಮಾನ್ ಖಾನ್ ಕ್ಷಮೆಯಾಚಿಸುವವರೆಗೂ ನನ್ನ ಪ್ರಯತ್ನ ಮುಂದುವರಿಸುತ್ತೇನೆ. ಸುಮಾರು ಒಂದೂವರೆ ವರ್ಷದ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಅವರಿಗೆ ಸಾಕಷ್ಟು ವಿಷಯಗಳನ್ನು ವಿವರಿಸಿದ್ದೆ. 'ನಿಮ್ಮ ಜೀವಕ್ಕೆ ಅಪಾಯವಿದೆ. ನೀವು ಒಬ್ಬ ಸೂಪರ್‌ಸ್ಟಾರ್, ಹೀಗೆಲ್ಲಾ ವರ್ತಿಸಬೇಡಿ' ಎಂದು ಹೇಳಿದ್ದೆ. ಆಗ ಅವರು 'ಸರಿ, ಸರಿ, ನಾನು ಮಾಡುತ್ತೇನೆ' ಎಂದು ಹೇಳಿದ್ದರು, ಆದರೆ ನಂತರ ಅವರು ನನ್ನನ್ನು ಭೇಟಿಯಾಗಲಿಲ್ಲ ಎಂದು ದೇವೇಂದ್ರ ಬುಡಿಯಾ ಹೇಳಿದರು.
ಲಾರೆನ್ಸ್ ಜೊತೆಯೂ ಮಾತನಾಡಿದ್ದಾಗಿ ತಿಳಿಸಿದ ಬುಡಿಯಾ, ವಿವಾದವನ್ನು ಎಳೆದುಕೊಂಡು ಹೋಗದಂತೆ ಮತ್ತು ಪರಿಸ್ಥಿತಿಯನ್ನು ಶಾಂತಗೊಳಿಸುವಂತೆ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದರು. ಇಂತಹ ಘಟನೆಗಳಿಂದ ಅಂತಿಮವಾಗಿ ಏನು ಸಾಧಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಜೀವಹಾನಿಯಿಂದ ಯಾರಿಗೂ ಲಾಭವಾಗುವುದಿಲ್ಲ ಮತ್ತು ಇಂತಹ ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಲಾರೆನ್ಸ್ ಜೊತೆ ಮಾತನಾಡಿದ್ದೆ. ಅವರ ಸ್ನೇಹಿತರೊಬ್ಬರು ಈ ಮಾತುಕತೆಗೆ ವ್ಯವಸ್ಥೆ ಮಾಡಿದ್ದರು. ಆಗ, 'ನೋಡಿ ಸಹೋದರ, ಆತನಿಗೆ (ಸಲ್ಮಾನ್ ಖಾನ್‌ಗೆ) ಯಾವುದೇ ತೊಂದರೆ ಕೊಡಬೇಡಿ. ಒಂದು ವರ್ಷದೊಳಗೆ ಆತ ಮರಳಿ ಬರುತ್ತಾನೆ ಮತ್ತು ಕ್ಷಮೆಯೂ ಕೇಳುತ್ತಾನೆ. ನಿಮ್ಮ ಕೆಲಸವೇ ಬೇರೆ ರೀತಿಯದ್ದು, ಆದ್ದರಿಂದ ಒಳ್ಳೆಯ ಕೆಲಸವನ್ನೇ ಮಾಡಿ. ಆತನ ಮೇಲೆ ದಾಳಿ ಮಾಡುವುದರಿಂದ ನಮಗೆ ಸಿಗುವುದೇನು?' ಎಂದು ಹೇಳಿದ್ದೆ. ಅದಕ್ಕೆ ಅವರು, 'ನಾನು ಆತನಿಗೆ 12 ತಿಂಗಳ ಕಾಲಾವಕಾಶ ನೀಡುತ್ತೇನೆ, ಒಂದು ಅಥವಾ ಒಂದೂವರೆ ವರ್ಷದೊಳಗೆ ಆತ ಕ್ಷಮೆ ಕೇಳುತ್ತಾನೆ' ಎಂದು ಹೇಳಿದ್ದರು. ಆದರೆ ಈಗ ಮತ್ತೆ ಎಲ್ಲವೂ ಮೊದಲಿನಂತೆಯೇ ಶುರುವಾಗಿದೆ. ಸಲ್ಮಾನ್ ಖಾನ್ ಅವರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆ ಕೇಳುವಂತೆ ಸಲಹೆ ನೀಡಿರುವುದಾಗಿ ಬುಡಿಯಾ ತಿಳಿಸಿದ್ದಾರೆ.
ಟೈಗರ್ ಶ್ರಾಫ್ ಅವರ ಮೇಲಿನ ಗುಂಡಿನ ದಾಳಿಯ ಹೊಣೆಯನ್ನು ಸಾಮಾಜಿಕ ಜಾಲತಾಣವೊಂದರ ಪೋಸ್ಟ್‌ನಲ್ಲಿ ಹೊತ್ತುಕೊಂಡ ನಂತರ, ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯಿ ನಡುವಿನ ಹಳೆಯ ವೈಷಮ್ಯ ಮತ್ತೆ ಮುನ್ನೆಲೆಗೆ ಬಂದಿದೆ.
ಮುಂಬೈ ಚಿತ್ರರಂಗದಲ್ಲಿ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವವರು ಮತ್ತು ನಮ್ಮ ಮಾತನ್ನು ಕೇಳದವರು ಇದೇ ರೀತಿಯ ದುರಂತವನ್ನು ಎದುರಿಸಬೇಕಾಗುತ್ತದೆ" ಎಂದು ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ನಡೆದಿದೆ.
ನಟ ಟೈಗರ್ ಶ್ರಾಫ್ ಫುಟ್‌ಬಾಲ್ ಕ್ಲಬ್‌ನಿಂದ ಹೊರಬರುತ್ತಿದ್ದಾಗ, ಆರೋಪಿಗಳು ನಟನ ಕಾರಿನತ್ತ ಗುಂಡು ಹಾರಿಸಿದ್ದಾರೆ. ನಟನಿಗೆ ನೇರವಾಗಿ ಗುಂಡೇಟು ತಗುಲದಿದ್ದರೂ, ಈ ಘಟನೆಯಲ್ಲಿ ಅವರ ಚಾಲಕ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 109(1) ಮತ್ತು 3(5) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ (Arms Act) ಸೆಕ್ಷನ್ 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಮೂವರು ಆರೋಪಿಗಳನ್ನು ಸೋಮವಾರ ಕೋಟಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ಮುಂಬೈ ಪೊಲೀಸರ ವಶಕ್ಕೆ (transit remand) 48 ಗಂಟೆಗಳ ಕಾಲ ಒಪ್ಪಿಸಿದ್ದಾರೆ.