

ಮುಂಬೈ: ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಮುಂಬೈ ಪೊಲೀಸರು, ಒಟ್ಟು 10 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ನಟ ಟೈಗರ್ ಶ್ರಾಫ್ ಅವರು ಒಮ್ಮೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹಾಡಿ ಹೊಗಳಿದ ಕಾರಣಕ್ಕೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅವರನ್ನು ಟಾರ್ಗೆಟ್ ಮಾಡಿತ್ತು ಎಂದು ತನಿಖಾಧಿಕಾರಿಗಳಿಗೆ ಆರೋಪಿಗಳಲ್ಲಿ ಒಬ್ಬನು ಹೇಳಿದ್ದಾನೆ.
ಕಳೆದ ಭಾನುವಾರದಂದು ಜುಹು ಆಟದ ಮೈದಾನದಲ್ಲಿ ಫುಟ್‌ಬಾಲ್ ಆಡಿ ಹೊರಬರುತ್ತಿದ್ದಾಗ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ಇಬ್ಬರು ಬಂದೂಕುಧಾರಿಗಳು ಅವರ ಬಿಎಂಡಬ್ಲ್ಯು(BMW) ಕಾರಿನ ಮೇಲೆ ಏಳು ಸುತ್ತು ಗುಂಡು ಹಾರಿಸಿ, ನಂತರ ಮತ್ತೊಬ್ಬ ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದರು.
ಈ ಘಟನೆಯಲ್ಲಿ ನಟನ ಚಾಲಕ ಮತ್ತು ಅಲ್ಲಿದ್ದ ಒಬ್ಬ ವ್ಯಕ್ತಿ ಗಾಯಗೊಂಡಿದ್ದು. ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದನು.
ಇದೀಗ, ಈ ಪ್ರಕರಣದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದ್ದು, ಟೈಗರ್ ಶ್ರಾಫ್ ಅವರನ್ನು ಬಿಷ್ಣೋಯ್ ಗ್ಯಾಂಗ್ ಏಕೆ ಗುರಿಯಾಗಿಸಿಕೊಂಡಿತು ಎಂಬುದಕ್ಕೆ ನಿಜವಾದ ಕಾರಣವನ್ನು ಆರೋಪಿಗಳಲ್ಲಿ ಒಬ್ಬ ಬಹಿರಂಗಪಡಿಸಿದ್ದಾನೆ.
ಟೈಗರ್ ಶ್ರಾಫ್ ಮತ್ತು ಸಲ್ಮಾನ್ ಖಾನ್ ನಡುವಿನ ನಿಕಟ ಸಂಬಂಧವೇ ಇದಕ್ಕೆ ಮುಖ್ಯ ಕಾರಣವೆಂದು ಈಗಾಗಲೇ ವರದಿಯಾಗಿತ್ತು, ಆದರೆ ಈ ಸಂಚು ರೂಪಿಸಲು ಕಾರಣವಾದ ನಿರ್ದಿಷ್ಟ ಘಟನೆಯ ಬಗ್ಗೆಯೂ ಆರೋಪಿ ವಿವರಿಸಿದ್ದಾನೆ.
2022ರಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಟೈಗರ್ ಶ್ರಾಫ್ ಅವರು 'ಬಜರಂಗಿ ಭಾಯಿಜಾನ್' ನಟ ಸಲ್ಮಾನ್ ಖಾನ್ ಅವರನ್ನು ಹೊಗಳುತ್ತಾ, "ಚಿತ್ರರಂಗದಲ್ಲಿ ಸಲ್ಮಾನ್ ಒಬ್ಬರೇ 'ಟೈಗರ್' (ಹುಲಿ)" ಎಂದು ಹೇಳಿದ್ದರು. ಇದು ಅವರನ್ನು ಟಾರ್ಗೆಟ್ ಮಾಡಲು ಕಾರಣವಾಯಿತು ಎಂದು ಆರೋಪಿ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹಿಂದೆ ಕೂಡ ಸಲ್ಮಾನ್ ಖಾನ್‌ಗೆ ಆಪ್ತರಾದವರ ವಿರುದ್ಧ ಬೆದರಿಕೆಗಳನ್ನು ಹಾಕಿತ್ತು. ಈ ಹಿನ್ನೆಲೆಯಲ್ಲಿ, ಟೈಗರ್ ಶ್ರಾಫ್ ಅವರ ಈ ಹೇಳಿಕೆಯೇ ಅವರನ್ನು ಗುರಿಯಾಗಿಸಿಕೊಳ್ಳಲು ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.