ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಮಾಲ್ಗುಡಿ ಡೇಸ್'ಗಾಗಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ನಿರೂಪಕರು ಘೋಷಿಸಿದರು. ಜೋರಾಗಿ ಶಿಳ್ಳೆ ಚಪ್ಪಾಳೆ ಸದ್ದು ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡಿದ್ದರು. ದ್ಯಾಟ್ಸ್ ಅಪ್ಪು!
ಮಾಸ್ಟರ್ ಮಂಜುನಾಥ್ ಮತ್ತು ಪುನೀತ್ ರಾಜಕುಮಾರ್ ಬಾಲ್ಯದ ಫೋಟೊ
ಮಾಸ್ಟರ್ ಮಂಜುನಾಥ್ ಮತ್ತು ಪುನೀತ್ ರಾಜಕುಮಾರ್ ಬಾಲ್ಯದ ಫೋಟೊ

ಸಂದರ್ಶನ- ಲೇಖನ: ಹರ್ಷವರ್ಧನ್ ಸುಳ್ಯ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಲನಟರಾಗಿ ನಮ್ಮ ನೆನಪುಗಳಲ್ಲಿ ಹಾಸುಹೊಕ್ಕಾಗಿರುವವರಲ್ಲಿ ಅಪ್ಪು, ಮಾಸ್ಟರ್ ಮಂಜುನಾಥ್, ಮಾಸ್ಟರ್ ಆನಂದ್ ಮೊದಲಾದವರು ಸೇರುತ್ತಾರೆ. ಈ ಮೂರು ರತ್ನಗಳಲ್ಲಿ ನಾವಿಂದು ಒಬ್ಬರನ್ನು ಕಳೆದುಕೊಂಡಿದ್ದೇವೆ. ಪುನೀತ್ ರಾಜಕುಮಾರ್ ಅವರು ತೆರೆಯ ಮೇಲೆ ಮಾತ್ರವಲ್ಲದೆ ತೆರೆಯ ಹಿಂದುಗಡೆಯೂ ಅಸಂಖ್ಯ ಜನರನ್ನು ಪ್ರಭಾವಿಸಿದವರು. ಈ ಬಗ್ಗೆ ಮಾಸ್ಟರ್ ಲೋಹಿತ್ ಜೊತೆಗಿನ ಒಡನಾಟವನ್ನು ಮಾಲ್ಗುಡಿ ಡೇಸ್ ಖ್ಯಾತಿಯ ನಟ ಮಾಸ್ಟರ್ ಮಂಜುನಾಥ್ kannadaprabha.com ಜೊತೆ ಮೆಲುಕು ಹಾಕಿದ್ದಾರೆ. 

ಮೊದಲು ನೋಡಿದ್ದು 

ಮೊಟ್ಟ ಮೊದಲ ಬಾರಿ ಮಾಸ್ಟರ್ ಮಂಜುನಾಥ್ ಅವರು ಅಪ್ಪುರನ್ನು ನೋಡಿದ್ದು ಅಪ್ಪಾಜಿ ಜೊತೆ. ಅಂದರೆ ಅಣ್ಣಾವ್ರು ಡಾ.ರಾಜಕುಮಾರ್ ಜೊತೆ. ಸ್ಥಳ ಕನ್ನಿಂಗ್ ಹ್ಯಾಂ ರಸ್ತೆ. ಇಸವಿಯೂ ಗೊತ್ತಿಲ್ಲದ ಪ್ರಾಯ ಅದು ಮಂಜುನಾಥ್ ಅವರಿಗೆ. ಬಹಳ ಹಿಂದೆ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಕಾವೇರಿ ಇಂಟರ್ ಕಾಂಟಿನೆಂಟಲ್ ಎಂಬುದೊಂದು ಹೋಟೇಲ್ ಇತ್ತು. ಯಾವುದೋ ಕಾರ್ಯಕ್ರಮ ನಿಮಿತ್ತ ಅಣ್ಣಾವ್ರು ಕುಟುಂಬ ಸಮೇತ ಅಲ್ಲಿಗೆ ಆಗಮಿಸಿದ್ದರು.

ಅದೇ ಕಾರ್ಯಕ್ರಮದಲ್ಲಿ ಮಾಸ್ಟರ್ ಮಂಜುನಾಥ್ ಕೂಡಾ ಇದ್ದರು. ಅಣ್ಣಾವ್ರ ಕೈ ಹಿಡಿದುಕೊಂಡು ಪುಟಪುಟನೆ ಓಡಾಡಿಕೊಂಡಿದ್ದ ಮಾಸ್ಟರ್ ಲೋಹಿತ್ ರನ್ನು ಮಾಸ್ಟರ್ ಮಂಜುನಾಥ್ ಭೇಟಿ ಮಾಡಿದ್ದು ಅದೇ ಮೊದಲು. ಮೊದಲ ಭೇಟಿಯಲ್ಲಿ ಪರಿಚಯವಾಯಿತೇ ಹೊರತು ಹೆಚ್ಚು ಒಡನಾಟ ಬೆಳೆದಿರಲಿಲ್ಲ. ಅಲ್ಲದೆ ಅದಕ್ಕೆ ಮುಂಚೆ ರಾಜಕುಮಾರ್ ಎಷ್ಟು ದೊಡ್ಡ ಸಿನಿಮಾ ನಟರಾಗಿದ್ದರು ಎನ್ನುವುದು ಕೂಡಾ ತಿಳಿಯದ ವಯಸ್ಸು ಮಾಸ್ಟರ್ ಮಂಜುನಾಥ್ ಅವರದು. 

ಭಕ್ತ ಪ್ರಹ್ಲಾದ ನೋಡಿ ಸುಸ್ತು

ನಂತರ ಬಿಡುಗಡೆಯಾಗಿದ್ದು ಭಕ್ತ ಪ್ರಹ್ಲಾದ ಸಿನಿಮಾ. ಅಣ್ಣಾವ್ರು ಹಿರಣ್ಯ ಕಶಿಪು ಪಾತ್ರದಲ್ಲಿಯೂ, ಮಾಸ್ಟರ್ ಲೋಹಿತ್ ಪ್ರಹ್ಲಾದನ ಪಾತ್ರದಲ್ಲಿಯೂ ಅಮೋಘ ಅಭಿನಯ ನೀಡಿದ್ದ ಸಿನಿಮಾ ಅದು. ಅದನ್ನು ನೋಡಿದ ಮೇಲೆ ಮಾಸ್ಟರ್ ಮಂಜುನಾಥ್ ಲೋಹಿತ್ ರ ಅಪ್ಪಟ ಅಭಿಮಾನಿಯಾಗಿಬಿಟ್ಟಿದ್ದರು. ಅವರಿಗೂ ಲೋಹಿತ್ ಗೂ ಒಂದೇ ವರ್ಷದ ಅಂತರ. ಹೀಗಾಗಿ ಅವರನ್ನು ಸರೀಕರು ಎಂದರೂ ತಪ್ಪಿಲ್ಲ. ಆ ಹೊತ್ತಿಗೆ ಮಂಜುನಾಥ್ ಕೂಡಾ ಗಿರೀಶ್ ಕಾರ್ನಾಡರ ಜೊತೆ ಸಿನಿಮಾದಲ್ಲಿ ನಟಿಸಿಯಾಗಿತ್ತು. 

ಇಂದಿಗೂ ಮಾಸ್ಟರ್ ಮಂಜುನಾಥ್ ಅವರ ಆಲ್ ಟೈಮ್ ಫೇವರಿಟ್ ಸಿನಿಮಾ ಯಾವುದು ಎಂದು ಕೇಳಿದರೆ ಥಟ್ಟಂಥ ಅವರ ಬಾಯಲ್ಲಿ ಬರುವುದು 'ಭಕ್ತ ಪ್ರಹ್ಲಾದ' ಸಿನಿಮಾ. ಚಿತ್ರರಂಗದ ಯಾರೇ ಕಲಾವಿದರನ್ನು ಕೇಳಿದರೂ ಪೌರಾಣಿಕ ಪಾತ್ರ ನಿರ್ವಹಿಸುವುದು ಎಷ್ಟು ಕಷ್ಟ ಎನ್ನುವುದು ತಿಳಿಯುತ್ತದೆ. ಅಂಥದ್ದರಲ್ಲಿ ಅಣ್ಣಾವ್ರ ರೌದ್ರಾವತಾರದ ಎದುರು ಅವರ ಪ್ರತಿಭೆಗೆ ಸರಿತಾಕುವಂತೆ ಲೋಹಿತ್ ನಟಿಸಿದ್ದು ಮಂಜುನಾಥ್ ಅವರ ಅಚ್ಚರಿಗೆ ಕಾರಣವಾಗಿತ್ತು. ಅಂದೇ ಅವರು ಅಪ್ಪುವಿನ ಫ್ಯಾನ್ ಆಗಿಬಿಟ್ಟಿದ್ದರು. 

ಚಿತ್ರೋತ್ಸವದಲ್ಲಿ ಬೆಸೆದ ಸ್ನೇಹ

ಇಷ್ಟಾದರೂ ಅಂದಿನ ದಿನಗಳಲ್ಲಿ ಮಾಸ್ಟರ್ ಮಂಜುನಾಥ್ ಮತ್ತು ಮಾಸ್ಟರ್ ಲೋಹಿತ್ ಪರಸ್ಪರ ಭೇಟಿಯಾಗಿರಲಿಲ್ಲ. ಹಿಂದೊಮ್ಮೆ ಪರಿಚಯವಾಗಿದ್ದು ಬಿಟ್ಟರೆ ಭೇಟಿ ನಡೆದಿರಲಿಲ್ಲ. ಇದಾಗಿ 2 ವರ್ಷಗಳ ನಂತರ ಅವರಿಬ್ಬರ ಭೇಟಿಗೆ ಆಕಸ್ಮಿಕವಾಗಿ ಅವಕಾಶ ಒದಗಿಬಂಡಿತ್ತು.  1985ರಲ್ಲಿ ಪುನೀತ್ ರಾಜಕುಮಾರ್ ಅವರ ಬೆಟ್ಟದ ಹೂ ಸಿನಿಮಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾಕಣಕ್ಕೆ ಆಯ್ಕೆಯಾಗಿತು. ಹೀಗಾಗಿ ಅವರು ತಮ್ಮ ಕಸಿನ್ ಸೋದರನ ಜೊತೆ ಚಿತ್ರೋತ್ಸವಕ್ಕೆ ಆಗಮಿಸಿದ್ದರು. ಅದೇ ವರ್ಷ ಮಾಲ್ಗುಡಿ ಡೇಸ್ ಧಾರಾವಾಹಿ ಸರಣಿಯಲ್ಲಿನ ನಟನೆಗಾಗಿ ಮಾಸ್ಟರ್ ಮಂಜುನಾಥ್ ನಟ ವಿಭಾಗಕ್ಕೆ ಆಯ್ಕೆಯಾಗಿದ್ದರು. 

ಚಿತ್ರೋತ್ಸವ ನಡೆಯುತ್ತಿದ್ದಿದ್ದು ಒಡಿಶಾದ ಭುವನೇಶ್ವರದಲ್ಲಿ. ಮಂಜುನಾಥ್ ಮತ್ತು ಲೋಹಿತ್ ಇಬ್ಬರಿಗೂ ಒಂದೇ ಹೋಟೆಲಿನಲ್ಲಿ ರೂಮ್ ಕಾದಿರಿಸಲಾಗಿತ್ತು. ರೂಮುಗಳು ಇದ್ದಿದ್ದೂ ಅಕ್ಕಪಕ್ಕದಲ್ಲೇ. ಅಲ್ಲಿ ಕನ್ನಡಿಗರು ಇಬ್ಬರೇ ಇದ್ದಿದ್ದರಿಂದ ಲೋಹಿತ್ ಮತ್ತು ಮಂಜುನಾಥ್ ಅವರ ನಡುವಿನ ಪರಿಚಯ ಗೆಳೆತನಕ್ಕೆ ತಿರುಗಿತ್ತು. ಬೆಳಿಗ್ಗೆಯೆಲ್ಲಾ ಚಿತ್ರೋತ್ಸವದಲ್ಲಿ ಓಡಾಡಿ ಸಂಜೆಯಾಗುತ್ತಲೇ ಇಬ್ಬರೂ ಯಾರಾದರೊಬ್ಬರ ರೂಮಿನಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿದ್ದರು. 

ಇನ್ನೊಬ್ಬರ ಗೆಲುವು ಸಂಭ್ರಮಿಸುವ ದೊಡ್ಡ ಗುಣ

ಚಿತ್ರೋತ್ಸವದಲ್ಲಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ಘೋಷಣೆ ಕೂಗಿದರು. ಹಾಲ್ ನಲ್ಲಿ ಜೋರಾಗಿ ಶಿಳ್ಳೆ ಚಪ್ಪಾಳೆ ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡುಬಂದರು. ಆತ ಎದ್ದು ನಿಂತು ಮಾಸ್ಟರ್ ಮಂಜುನಾಥ್ ಕಡೆಗೆ ಅಭಿಮಾನದ ನೋಟ ಬೀರುತ್ತಾ, ಶಿಳ್ಳೆ ಕೂಗಿ ಚಪ್ಪಾಳೆ ತಟ್ಟಿ ಅವರ ಗೆಲುವನ್ನು ಸಂಭ್ರಮಿಸುತ್ತಿದ್ದರು. ದ್ಯಾಟ್ಸ್ ಅಪ್ಪು! ಇನ್ನೊಬ್ಬರ ಗೆಲುವನ್ನು ಸಂಭ್ರಮಿಸೋದು ಅವರ ದೊಡ್ಡ ಗುಣ.

ಪಬ್ಲಿಕ್ ಮುಂದೆ ಕಲಾವಿದರಾಗಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಮಾಸ್ಟರ್ ಮಂಜುನಾಥ್ ಅಪ್ಪುವನ್ನು ನೋಡಿ ಕಲಿತಿದ್ದು ಅಲ್ಲಿಯೇ. ಮಾಧ್ಯಮದ ಮಂದಿ ಪ್ರಶ್ನೆ ಕೇಳುವಾಗ ಅವರೊಡನೆ ಯಾವರ ರೀತಿ ನಡೆದುಕೊಳ್ಳಬೇಕು. ಯಾವ ಪ್ರಶ್ನೆಗೆ ಹೇಗೆ ಉತ್ತರ ನೀಡಬೇಕು ಎಂಬಿತ್ಯಾದಿ ವಿಷಯಗಳು ಮಂಜುನಾಥ್ ಅವರಿಗೆ ಮನದಟ್ಟಾಗಿದ್ದು ಅಪ್ಪುವನ್ನು ನೋಡಿದಮೇಲೆಯೇ. ಸಿನಿಮಾ ಹಿನ್ನೆಲೆಯಿಂದ ಬಂದಿರದ ಮಾಸ್ಟರ್ ಮಂಜುನಾಥ್ ಅವರಿಗೆ ಇದೆಲ್ಲವೂ ಹೊಸತು. ಅಲ್ಲದ ಚಿಕ್ಕವರಾಗಿದ್ದಿದ್ದರಿಂದ ಅವೆಲ್ಲಾ ಸಂಗತಿಗಳು ಅರ್ಥವೂ ಆಗುತ್ತಿರಲಿಲ್ಲ. ಆದರೆ ಅಪ್ಪು ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅದನ್ನು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಗ್ರೇಟ್. ವಿನಯ ಎನ್ನುವುದು ಸಂಸ್ಕಾರದಿಂದ ಬರುವಂಥದ್ದು ಎನ್ನುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ.

ಯಾವಾಗ ಸಿಕ್ಕರೂ ಅದೇ ವಿನಯ 

ಇದಾದ ನಂತರ ಭೇಟಿ ಆಗಬೇಕೆಂದು ಅಂದುಕೊಂಡು ಭೇಟಿ ಆಗಿದ್ದಕ್ಕಿಂತ ಆಕಸ್ಮಿಕವಾಗಿ ಕಾರ್ಯಕ್ರಮಗಳಲ್ಲಿ, ಕಲಾವಿದರ ಸಂಘ ಸಭೆಗಳಲ್ಲಿ ಭೇಟಿಯಾಗಿದ್ದೇ ಹೆಚ್ಚು. ಎಲ್ಲಿ ಭೇಟಿಯಾದರೂ ಅದೇ ಹಳೆಯ ಸ್ನೇಹವನ್ನು ನೆನಪಿಟ್ಟುಕೊಂಡು, ಆಪ್ತವಾಗಿ ಮಾತನಾಡಿಸುತ್ತಿದ್ದಿದ್ದು ಪುನೀತರ ವೈಶಿಷ್ಟ್ಯ. ಕಡೆಯವರೆಗೂ ಅವರು ಇದ್ದಿದ್ದು ಹಾಗೆಯೇ. 

ಅವರಿಬ್ಬರ ನಡುವಿನ ಸ್ನೇಹ ಸಿನಿಮಾರಂಗದ ಸ್ನೇಹವಾಗಿರಲಿಲ್ಲ. ಹೃದ್ಯ, ನಿಷ್ಕಲ್ಮಶ ಸ್ನೇಹವಾಗಿತ್ತು ಎನ್ನುವಾಗ ಮಾಸ್ಟರ್ ಮಂಜುನಾಥ್ ದನಿ ಗದ್ಗದಿತವಾಗುತ್ತದೆ. ನಾವು ಜೊತೆ ಸೇರುತ್ತಿದ್ದಿದ್ದು ಅಪರೂಪ. ಆದರೆ ಜೊತೆ ಸೇರಿದಾಗ ಜೀವದ ಗೆಳೆಯರಂತೆ ಜೀವನ ಹಂಚಿಕೊಳ್ಳುತ್ತಿದ್ದೆವು. ಕ್ಲೋಸ್ ಆಗಲು ದಿನವೂ ಜೊತೆಯಿರಬೇಕು, ಜೊತೆಯಾಗಿಯೇ ಹಾಲ ಕಳೆದಿರಬೇಕು ಎನ್ನುವುದೆಲ್ಲಾ ಅಪ್ಪು ವಿಷಯದಲ್ಲಿ ಸುಳ್ಳು. ಯಾರಾದರೊಬ್ಬರು ಇಷ್ಟವಾದರೆಂದರೆ ಮುಗಿಯಿತು. ಅವರು ಸಿಗಲಿ ಬಿಡಲಿ, ಮಾತನಾಡಿಸಲಿ ಬಿಡಲಿ ಅಪ್ಪುಗೆ ಅವರು ಎಂದಿಗೂ ಆಪ್ತ.  

ಪುನೀತ್ ವಿಡಿಯೊ ಶುಭಾಶಯ

ಚಿತ್ರರಂಗದಿಂದ ದೂರವುಳಿದಿರುವ ಮಾಸ್ಟರ್ ಮಂಜುನಾಥ್ ಗೆ ಅಪ್ಪು ಸಿಕ್ಕಾಗಲೆಲ್ಲಾ ಯಾಕೆ ಸಿನಿಮಾಗಳಿಂದ ದೂರವಿದ್ದೀರಿ ಇನ್ನಾದರೂ ಸಿನಿಮಾ ಕೆಲಸ ಮಾಡಿ ಎನ್ನುತ್ತಿದ್ದರಂತೆ. ಅದಕ್ಕಾಗಿ ಅಪ್ಪುವಿನಿಂದ ಗದರಿಸಿಕೊಂಡಿದ್ದೂ ಇದೆ. ಅದು ಬಿಟ್ಟರೆ ಅವರು ಮಾತನಾಡುತ್ತಿದ್ದಿದ್ದು ಆಹಾರದ ಬಗ್ಗೆ. ಇಂಥಾ ಹೋಟೆಲ್ ನಲ್ಲಿ ಇಂಥಾ ಮೆನು ಇದೆ. ಅದರಲ್ಲಿ ಇಂಥಾ ಖಾದ್ಯ ಸೂಪರಾಗಿ ಮಾಡ್ತಾರೆ ಅಂತ ಹೇಳುತ್ತಿದ್ದರು. 40ನೇ ವರ್ಷದ ಹುಟ್ಟುಹಬ್ಬಕ್ಕೆ ಮಂಜುನಾಥ್ ಅವರಿಗೆ ಒಂದು ಅಚ್ಚರಿ ಕಾದಿತ್ತು. ಪುನೀತ್ ತಮ್ಮ ಗೆಳೆಯನಿಗೆ ಶುಭಾಶಯ ಕೋರಿ ವಿಡಿಯೊ ಮಾಡಿ ಕಳುಹಿಸಿದ್ದರು. (ವಿಡಿಯೋ ಕಡೆಯಲ್ಲಿದೆ)

ವಿಡಿಯೋದಲ್ಲಿ ಪುನೀತ್ ತಾವು ಮಾಸ್ಟರ್ ಮಂಜುನಾಥ್ ಅವರ ಫ್ಯಾನ್ ಎಂದು ಮುಕ್ತವಾಗಿ ಹೊಗಳುವುದನ್ನು ಕಂಡಾಗ ನಿಜಕ್ಕೂ ಅವರು ದೊಡ್ಡವರು ಅನ್ನಿಸಿಕೊಳ್ಳುತ್ತಾರೆ. ಅದರ ಅಗತ್ಯ ಏನಿದೆ ಎಂದು ಪ್ರಶ್ನಿಸುತ್ತಾರೆ ಮಾಸ್ಟರ್ ಮಂಜುನಾಥ್. ಒಬ್ಬ ಸೂಪರ್ ಸ್ಟಾರ್, ಅದರಲ್ಲೂ ಅಣ್ಣಾವ್ರಂಥ ದಂತಕಥೆಯ ಪುತ್ರನಾಗಿ ಅವರೇಕೆ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಬೇಕು. ನಮ್ಮ ನಾಡಿನಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಂಥದ್ದರಲ್ಲಿ ಅವರೇಕೆ ನನಗೆ ಫ್ಯಾನ್ ಆಗಬೇಕು? ಅದು ಅವರ ದೊಡ್ಡತನ, ವಿನಯ ಎಂದು ಹನಿಗಣ್ಣಾಗಿ ಮೇಲೆ ನೋಡುತ್ತಾರೆ ಮಂಜುನಾಥ್. 

ಕಸ್ತೂರಿನಿವಾಸ ಸಿನಿಮಾದ ಕಡೆಯಲ್ಲಿ ಕೊನೆಯುಸಿರೆಳೆದ ಅಣ್ಣಾವ್ರು ನೆಲದ ಮೇಲೆ ಬಿದ್ದಿರುತ್ತಾರೆ. ಅಶ್ವಥ್ ಒಂದು ಮಾತು ಹೇಳುತ್ತಾರೆ. ನೋಡಿ ಅವರ ಕೈ ಈಗಲೂ ಭೂಮಿಯನ್ನೇ ನೋಡುತ್ತಿದೆ. ಅಕಾಶ ನೋಡುತ್ತಿಲ್ಲ. ಕರುನಾಡಿಗೇ ವಿನಯದ ಪಾಠ ಹೇಳಿದವರು ಅಣ್ಣಾವ್ರು. ಈ ಮಾತನ್ನೇ ಹಣೆಗೊತ್ತಿಕೊಂಡು ವೇದವಾಕ್ಯದಂತೆ ಬದುಕಿದವರು ಪುನೀತ್ ರಾಜಕುಮಾರ್. ಇವೇ ಮೌಲ್ಯಗಳ ಮೂಲಕ ಅವರು ನಮ್ಮೊಡನೆ ಜೀವಂತ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com