ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ 'ಹೊಸ ಬೆಳಕು' ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ

''ಪೆಡ್ರೊ'' ಕನ್ನಡ ಸಿನಿಮಾ ಪ್ರತಿಷ್ಟಿತ ಬೂಸಾನ್ ಮತ್ತು ಲಂಡನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗಿರೀಶ್ ಕಾಸರವಳ್ಳಿಯವರ ಚಿಂತನಾ ಪರಂಪರೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವ  ಭರವಸೆ ನಟೇಶ್ ಹೆಗಡೆ ಅವರಿಂದ ಮತ್ತೆ ಚಿಗುರೊಡೆದಿದೆ. ಕನ್ನಡಿಗರು ಸಂಭ್ರಮಿಸಬೇಕಾದ ಈ ಹೊತ್ತಿನಲ್ಲಿ ನಟೇಶ್ ಅವರ ಸಂದರ್ಶನ.

Published: 21st September 2021 10:52 AM  |   Last Updated: 21st September 2021 02:53 PM   |  A+A-


ನಟೇಶ್ ಹೆಗಡೆ(ಬಲ)

Online Desk

ಸಂದರ್ಶನ: ಹರ್ಷವರ್ಧನ್ ಸುಳ್ಯ


ಯಾವುದೇ ಒಂದು ಸಿನಿಮಾ ಆಗಲಿ ಅದು ಬದುಕಿನಿಂದ ಸೃಜಿಸಿರಬೇಕು, ಸಿನಿಮಾಗೆ ಇನ್ನೊಂದು ಸಿನಿಮಾ ಪ್ರೇರಣೆಯಾಗಬಾರದು ಎಂದು ಹೇಳುವ ಸೆನ್ಸಿಬಲ್ ನಿರ್ದೇಶಕ ನಟೇಶ್ ಹೆಗಡೆ ಕನ್ನಡ ಚಿತ್ರೋದ್ಯಮದಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿಯವರ ಸಿನಿಮಾಗಳನ್ನು ಮೆಚ್ಚಿಕೊಂಡ ಸಿನಿಮಾಸಕ್ತರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಕನ್ನಡಿಗರು ಹೆಮ್ಮೆ ಪಡುವ ನಿರ್ದೇಶಕ ಪೆಡ್ರೋ ಸಿನಿಮಾ ಮೂಲಕ ದೊರೆತಿದ್ದಾರೆ.   

ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವವಾದ ಬೂಸಾನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಪ್ರದರ್ಶನ ಕಾಣುತ್ತಿದೆ. ಶಿರಸಿ ಬಳಿಯ ಹಳ್ಳಿಯಲ್ಲಿ ಚಿತ್ರೀಕರಣಗೊಂಡ 'ಪೆಡ್ರೊ'  ಎನ್ನುವ ಕನ್ನಡ ಸಿನಿಮಾವನ್ನು ದೇಶ ವಿದೇಶದ ಸಿನಿಮಾಸಕ್ತರು, ಹೆಸರಾಂತ ನಿರ್ದೇಶಕರು ವೀಕ್ಷಿಸುತ್ತಾರೆ ಎನ್ನುವುದೇ ರೋಮಾಂಚಕ ಸಂಗತಿ.

ಪೆಡ್ರೋ ಸಿನಿಮಾವನ್ನು 'ಹೀರೊ' ನಟ ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ, ಛಾಯಾಗ್ರಹಣ ವಿಕಾಸ್ ಅರಸ್ ಅವರದು.   

ಜನರಿಗೆ ಅರ್ಥವಾಗೋದಿಲ್ಲ ಅನ್ನೋದು ಸುಳ್ಳು

ಸಿನಿಮಾ ನಿಜಕ್ಕೂ ಮಾಡಬೇಕಾದ ಕೆಲಸವನ್ನು ಮುಖ್ಯವಾಹಿನಿಯ ಸಿನಿಮಾಗಳು ಮಾಡುತ್ತಿಲ್ಲ ಎಂದು ನಟೇಶ್ ಬೇಸರ ವ್ಯಕ್ತಪಡಿಸುತ್ತಾರೆ. ಆ ಸಿನಿಮಾಗಳನ್ನು ಎಲ್ಲರೂ ಒಪ್ಪೋ ಹಾಗೆಯೇ ಮಾಡಿರುತ್ತಾರೆ. ರಿಯಲ್ ಅನ್ನಿಸುವಂಥದ್ದು, ನಿಜ ಬದುಕಿನಲ್ಲಿ ಕನೆಕ್ಟ್ ಮಾಡಿಕೊಳ್ಳುವಂಥದ್ದೂ ಇರುವುದಿಲ್ಲ. ಸಿನಿಮಾವನ್ನು ಮೂರು ಹಾಡು ಮೂರು ಫೈಟು ಎಂದುಕೊಂಡರೆ ಒಂದು ಸಿನಿಮಾ ತಲುಪಬಹುದಾದ ಬಹು ದೊಡ್ಡ ಎತ್ತರದ ಸಾಧ್ಯತೆಯನ್ನು ಕಿತ್ತುಕೊಂಡಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಜನರಿಗೆ ಅರ್ಥ ಆಗೋದಿಲ್ಲ ಎನ್ನುವ ಕಾರಣಕ್ಕೇ ಅದದೇ ಕ್ಲೀಷೆಗಳನ್ನು ಸಿನಿಮಾದಲ್ಲಿ ತೋರಿಸುವುದನ್ನು ನಟೇಶ್ ಒಪ್ಪುವುದಿಲ್ಲ. ಜನರಿಗೆ ಹೊಸ ಹೊಸ ಸಾಧ್ಯತೆಗಳನ್ನು ಪರಿಚಯಿಸಿದರೆ ಖಂಡಿತ ಒಪ್ಪಿಕೊಳ್ಳುತ್ತಾರೆ. ಅಂಥಾ ಪ್ರಯತ್ನಗಳಾಗಬೇಕು ಅಷ್ಟೇ. ಜನರಿಗೆ ಏನೂ ಅರ್ಥವಾಗೋದಿಲ್ಲ ಎಂದು ತಿಳಿಯುವುದನ್ನು ಸಿನಿಮಾ ತಯಾರಕರು ಮೊದಲು ಬಿಡಬೇಕು. 

ಕೇವಲ ಒಂದು ಪ್ರದೇಶಕ್ಕೆ ಸೀಮಿತ ಆಗಬಾರದು

ರಿಷಬ್ ಶೆಟ್ಟಿ

ನಮ್ಮಲ್ಲಿ ಹೆಚ್ಚಿನ ಸಿನಿಮಾಗಳು ಕೇವಲ ಒಂದೇ ಪ್ರಾಂತ್ಯಕ್ಕೆ ಸೀಮಿತವಾಗಿವೆ. ಅಲ್ಲಿನ ಕಥೆಗಳು, ಭಾಷೆ ಎಲ್ಲವೂ ಪುನರಾವರ್ತನೆಗೊಳ್ಳುತ್ತಲೇ ಇರುತ್ತವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮಂಡಿಯನ್ನು ಕೇವಲ ಹಾಸ್ಯಕ್ಕೆ ಮಾತ್ರವೆ ಬಳಸಿಕೊಳ್ಳುವುದು ಅವುಗಳಲ್ಲೊಂದು. ಈ ಬಗ್ಗೆ ನಟೇಶ್ ದನಿಯೆತ್ತಿದ್ದಾರೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ವಿಭಿನ್ನತೆ ಕಾಣಬಹುದು. ಅಲ್ಲಿಂದ ವೈಶಿಷ್ಟ್ಯಪೂರ್ಣ ಕಥೆಗಳನ್ನು ಹೊರಹೊಮ್ಮಿಸಬಹುದು. ರೆಪ್ರೆಸೆಂಟೇಷನ್ ಎನ್ನುವುದು ಕನ್ನಡ ಸಿನಿಮಾರಂಗದಲ್ಲಿ ಅತ್ಯಪರೂಪ, ಇದು ಬದಲಾಗಬೇಕು ಎನ್ನುವುದು ನಟೇಶ್ ಮನದಿಂಗಿತ. ಪ್ರತಿ ಹಳ್ಳಿಯವನ ಪ್ರಪಂಚವೂ ನಾವೆಲ್ಲರೂ ನೋಡುವ ಪ್ರಪಂಚಕ್ಕಿಂತ ವಿಭಿನ್ನವಾಗಿರುತ್ತವೆ. ಅವಕ್ಕೆ ವೇದಿಕೆ ಕಲ್ಪಿಸುವ ಅಗತ್ಯವಿದೆ ಎನ್ನುವ ನಟೇಶ್, ಈ ಸಂಗತಿಯನ್ನು ಪೆಡ್ರೊ ನಿರ್ಮಾಪಕ, ನಟ ರಿಷಬ್ ಶೆಟ್ಟಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರಿಗೆ ಧನ್ಯವಾದ ಅರ್ಪಿಸುತ್ತಾರೆ. . ರಿಷಬ್ ರಿಗೆ ಇರುವ ಸಿನಿಮಾ ದೂರದೃಷ್ಟಿತ್ವವನ್ನು ಮೆಚ್ಚಿಕೊಳ್ಳುತ್ತಾರೆ.  ಸಿನಿಮಾ ಶೂಟಿಂಗ್ ಶುರುವಾದ ನಂತರ ಯಾವತ್ತೂ ಕತೆಯ ವಿಷಯದಲ್ಲಾಗಲಿ, ಮೇಕಿಂಗ್ ವಿಷಯದಲ್ಲಾಗಲಿ ರಿಷಬ್ ಮಧ್ಯಪ್ರವೇಶಿಸಿಲ್ಲ. ಒಂದು ಒಳ್ಳೆಯ ಸಿನಿಮಾ ಮೂಡಿ ಬರಲು ಇದಕ್ಕಿಂತ ಇನ್ನೇನು ಬೇಕು.

ಕಿರುಚಿತ್ರದಿಂದ ತೆರೆದ ಬಾಗಿಲು

ಸಿನಿಮಾದ ನಿರ್ದೇಶಕ ಶಿರಸಿಯ ನಟೇಶ್ ಹೆಗಡೆ ತಾವು ಮಾಡಿದ ಮೊದಲ ಸಿನಿಮಾದಲ್ಲೇ ಪ್ರಾವೀಣ್ಯತೆ ಮೆರೆದಿದ್ದಾರೆ. ಬಿಎಸ್ಸಿ ಪದವೀಧರರಾಗಿರುವ ನಟೇಶ್ ಪತ್ರಿಕೋದ್ಯಮ ಪದವಿಯನ್ನೂ ಹೊಂದಿದ್ದಾರೆ. ಪತ್ರಿಕಾರಂಗ ಹಾಗೂ ಕಲರ್ಸ್ ವಾಹಿನಿಯಲ್ಲಿ ಒಂದಷ್ಟು ಸಮಯ ಕೆಲಸ ಮಾಡಿ ಸಿನಿಮಾ ಮೇಕಿಂಗ್ ನತ್ತಲೇ ಅವರು ವಾಲಿದ್ದರು. ಈ ಹಿಂದೆ ಅವರು ಕುರ್ಲಿ ಎನ್ನುವ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ತಮ್ಮ ಹಳ್ಳಿಯ ಪರಿಚಯಸ್ಥರನ್ನೇ ಪಾತ್ರಧಾರಿಗಳನ್ನಾಗಿ ಆರಿಸಿಕೊಂಡಿದ್ದರು ಎನ್ನುವುದು ವಿಶೇಷ. ಕುರ್ಲಿ ಎಂದರೆ ಏಡಿ ಎಂದರ್ಥ.
ಓರ್ವ ವ್ಯಕ್ತಿ ಶ್ರೀಮಂತರ ತೋಟದಲ್ಲಿ ಬಾಳೆ ಗೊನೆ ಕದಿಯುತ್ತಾನೆ. ಶ್ರೀಮಂತರು ಆ ಆರೋಪವನ್ನು ಕದ್ದ ವ್ಯಕ್ತಿಯ ಮಗನ ಮೇಲೆ ಹೊರಿಸುತ್ತಾರೆ. ಕಳ್ಳತನ ಮಾಡಿದವನೂ ತಾನು ಬಚಾವಾಗಲು ಮಗನೇ ಕಳ್ಳತನ ಮಾಡಿರಬಹುದು ಎಂಬಂತೆ ನಟಿಸುತ್ತಾನೆ. ತಂದೆ- ಮಗನ ನಡುವಿನ ಮಾನಸಿಕ ಸಂಘರ್ಷವನ್ನು ನಟೇಶ್ ಸೊಗಸಾಗಿ ಸೆರೆ ಹಿಡಿದಿದ್ದರು.  ನಟೇಶ್ ಅವರ ಕುರ್ಲಿ ಕಿರುಚಿತ್ರ ನೋಡಿ ಮೆಚ್ಚಿದ್ದ ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ರಾಜ್ ಬಿ. ಶೆಟ್ಟಿ ಅದನ್ನು ರಿಷಬ್ ಶೆಟ್ಟಿ ಗಮನಕ್ಕೆ ತಂದಿದ್ದರು. ರಿಷಬ್ ಪರಿಚಯವಾಗಲು ಕಿರುಚಿತ್ರ ಮತ್ತು ರಾಜ್ ಬಿ. ಶೆಟ್ಟಿ ಕಾರಣವಾಗಿದ್ದು ಹೀಗೆ. ಕುರ್ಲಿ ಕಿರುಚಿತ್ರ ನೋಡಿ ಮೆಚ್ಚಿಕೊಂಡ ರಿಷಬ್ ಶೆಟ್ಟಿ ಸಿನಿಮಾ ನಿರ್ದೇಶನದ ಆಫರ್ ನೀಡಿದ್ದರು. 

ಸಿನಿಮಾ ಕಥೆ, ಆತ್ಮ ಗಟ್ಟಿಯಾಗಿರಬೇಕು

ಎಲ್ಲರಿಗೆ ಮೆಚ್ಚುಗೆ ಆಗುವಂಥ ಸಿನಿಮಾ ಮಾಡುವುದರಲ್ಲಿ ತಮಗೆ ಆಸಕ್ತಿಯಿಲ್ಲ ಎನ್ನುವ ನಟೇಶ್ ತಾವು ಮಾಡುವ ಸಿನಿಮಾ ಮೊದಲು ತಮಗೇ ಸತ್ಯ ಎನ್ನಿಸಬೇಕು. ತನಗೇ ತೃಪ್ತಿಯಾಗದೆ ಯಾರದೋ ಮಾತಿಗೆ ಕಟ್ಟುಬಿದ್ದು ಕಥೆಯಲ್ಲಿ ಇಲ್ಲದ್ದನ್ನು ಸೇರಿಸುವ ಜಾಯಮಾನ ತಮ್ಮದಲ್ಲ ಎನ್ನುವುದು ಅವರ ವಿಚಾರಧಾರೆ. ಹಾಲಿವುಡ್, ಬಾಲಿವುಡ್ ನಂಥ ಮುಖ್ಯವಾಹಿನಿ ಸಿನಿಮಾಗಳ ಡಾಂಭಿಕತೆಯನ್ನು ಪ್ರಶ್ನಿಸುವ ನಟೇಶ್, ಸಿನಿಮಾದ ಕಥೆ, ಆತ್ಮ ಸತ್ವಯುತವಾಗಿರಬೇಕು ಆಗಲೇ ಅದು ಜನರ ಮನಸ್ಸನ್ನು ತಟ್ಟುವುದು ಎನ್ನುತ್ತಾರೆ. ಸಿನಿಮಾ ಕತೆ ಸತ್ವಯುತವಾಗಿದ್ದರೆ, ಸತ್ಯ ನಿಷ್ಠೆಯಿಂದ ಕೂಡಿದ್ದರೆ ಜಗತ್ತಿನ ಯಾವುದೇ ಭಾಷೆಯ ವ್ಯಕ್ತಿ ಆ ಸಿನಿಮಾ ನೋಡಿದರೂ ಕನೆಕ್ಟ್ ಮಾಡಿಕೊಳ್ಳುತ್ತಾನೆ. ಆತನಿಗೆ ಅದು ಆಪ್ತವೆನಿಸುತ್ತದೆ. ಮನುಷ್ಯದ ಆಚಾರ ವಿಚಾರ ಸಂಸ್ಕೃತಿ ಬೇರೆಯದಿದ್ದರೂ ಮೂಲಭೂತವಾಗಿ ನಾವೆಲ್ಲರೂ ಒಂದೇ. ಹೀಗಾಗಿ ಅಂಥಾ ಮೂಲಭೂತ ಅಂಶಗಳನ್ನೊಳಗೊಂಡ ಯಾವುದೇ ವಿದೇಶಿ ಸಿನಿಮಾ ಎಲ್ಲರಿಗೂ ಹತ್ತಿರವಾಗುತ್ತದೆ.

ಗಿರೀಶ್ ಕಾಸರವಳ್ಳಿ, ಋತ್ವಿಕ್ ಘಟಕ್, ಅಬ್ಬಾಸ್ ಕಿರೋಸ್ತಾಮಿ, ಆರ್ಸನ್ ವೆಲ್ಲಿಸ್, ವೆಟ್ರಿಮಾರನ್, ಜಿ. ಅರವಿಂದನ್ ಅವರು ನಟೇಶ್ ಮೆಚ್ಚಿನ ನಿರ್ದೇಶಕರು. ಭೂತಯ್ಯನ ಮಗ ಅಯ್ಯು, ಗಂಗವ್ವ ಗಂಗಾಮಾಯಿ ನಟೇಶ್ ಮೆಚ್ಚಿನ ಕನ್ನಡ ಸಿನಿಮಾ.

ಸಿನಿಮಾ ಅಂದರೆ ಇಂಪರ್ಫೆಕ್ಷನ್

ದೇಶ ವಿದೇಶದ ಸಿನಿಮಾಗಳನ್ನು ನೋಡಿ ಅರಗಿಸಿಕೊಂಡಿರುವ ನಟೇಶ್ ರ ಸಿನಿಮಾದಲ್ಲಿ ವಿದೇಶಿ ಸಿನಿಮಾಗಳ ಪ್ರಭಾವ ಗೋಚರಿಸುವುದಿಲ್ಲ ಎನ್ನುವುದು ಅಚ್ಚರಿ ಮೂಡಿಸುತ್ತದೆ. ವಿದೇಶಿ ಸಿನಿಮಾಗಳು, ಎಷ್ಟೇ ಚೆನ್ನಾಗಿ ಮೂಡಿಬಂದಿದ್ದರೂ ಅಲ್ಲಿನ ಫಾರ್ಮ್ಯುಲ, ಸೀನುಗಳು, ಶಾಟ್ ಗಳು ಅಲ್ಲಿನ ಕಥೆಗೆ ಪೂರಕವಾಗಿರುವಂತೆ ನಿರ್ದೇಶಕ ಮಾಡಿರುತ್ತಾನೆ. ಆ ಸಿನಿಮಾದಲ್ಲಿ ಚೆನ್ನಾಗಿ ಕಂಡುಬಂದ ಒಂದು ಶಾಟ್ ನಮ್ಮ ಸಿನಿಮಾದಲ್ಲಿಯೂ ಚೆನ್ನಾಗಿ ಕಾಣುತ್ತದೆ ಎಂದುಕೊಳ್ಳುವುದು ತಪ್ಪು. ಹೀಗಾಗಿಯೇ ನಟೇಶ್ ರಿಗೆ ಹಾಲಿವುಡ್, ಬಾಲಿವುಡ್ ಸಿನಿಮಾಗಳು ಕೃತಕವಾಗಿ ಕಾಣುತ್ತವೆ. ಎಲ್ಲವನ್ನೂ ಪರ್ಫೆಕ್ಟ್ ಆಗಿ ಕಾಣಿಸುವುದರಲ್ಲಿ ಅರ್ಥವಿಲ್ಲ. ಮನುಷ್ಯನ ಜೀವನ ತಪ್ಪುಗಳಿಂದ ಕೂಡಿದ ಹಾದಿ. ಸಿನಿಮಾ ಕೂಡಾ ಆ ಇಂಪರ್ಫೆಕ್ಷನ್ ಅನ್ನು ಪ್ರತಿಬಿಂಬಿಸಬೇಕು ಎನ್ನುವುದು ನಟೇಶ್ ತತ್ವ.

ಅವರ ಸಿನಿಮಾಗಳಲ್ಲಿ ಕರೆಂಟ್ ಕನೆಕ್ಷನ್

ನಟೇಶ್ ತಂದೆ ಗೋಪಾಲ ಹೆಗಡೆಯವರು ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್. ಚಿಕ್ಕಂದಿನಿಂದಲೂ ತಂದೆಯ ಕೆಲಸವನ್ನು ನೋಡಿಕೊಂಡು ಬಂಡಿರುವ ನಟೇಶ್ ಅವರ ಸಿನಿಮಾದಲ್ಲಿಯೂ ಕರೆಂಟ್ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ಕುತೂಹಲದ ವಿಷಯ. ಹೀಗಾಗಿ ಕರೆಂಟ್ ತಮ್ ತಮಗೆ ಗೊತ್ತಿಲ್ಲದೆಯೇ ತಮ್ಮ ಸಿನಿಮಾಗಳಲ್ಲಿ ಪಾತ್ರ ವಹಿಸುತ್ತದೆ ಂದು ನಗುತ್ತಾರೆ ನಟೇಶ್. ಅವರ ಕುರ್ಲಿ ಕಿರುಚಿತ್ರದಲ್ಲಿ ಕಳ್ಳತನದ ಆರೋಪ ಹೊತ್ತ ಹುಡುಗನಿಗೆ 'ಕರೆಂಟ್ ಕೊಡ್ಬೇಕಾ, ಕರೆಂಟ್ ಕೊಡ್ಬೇಕಾ' ಎಂದು ಹೆದರಿಸುವ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬಂಡಿತ್ತು. ಅದೇ ರೀತಿ ಪೆಡ್ರೊ ಸಿನಿಮಾದ ಪ್ರಮುಖ ಪಾತ್ರಧಾರಿಯೂ ಓರ್ವ ಎಲೆಕ್ಟ್ರೀಷಿಯನ್. ಕರೆಂಟ್ ಎಂದರೆ ಅಸ್ಥಿರತೆಯ(uncertainity) ಸಂಕೇತ. ಅದರ ಬಗ್ಗೆ ಯಾವತ್ತಿಗೂ ಒಂದು ಭಯ ಇದ್ದೇ ಇರುತ್ತದೆ. ಹೀಗಾಗಿ ಅದನ್ನು ಬಳಸಿಕೊಂಡಾಗ ಆ ದೃಶ್ಯ ನೋಡುಗನಲ್ಲಿ ನಾನಾ ತೆರನಾದ ಭಾವ ಸ್ಫುರಿಸುತ್ತದೆ ಎನ್ನುವುದು ನಟೇಶ್ ಅಭಿಪ್ರಾಯ.

ಪೆಡ್ರೊ ಬಗ್ಗೆ ಒಂದಷ್ಟು

ಪೆಡ್ರೊ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ನಟೇಶ್ ಹೆಗಡೆಯವರ ತಂದೆ ಗೋಪಾಲ ಹೆಗಡೆ ಎನ್ನುವುದು ವಿಶೇಷ. ಸಿನಿಮಾದ ಟ್ರೇಲರ್ ನಲ್ಲಿ ರಾತ್ರಿ ರೈನ್ ಕೋಟ್ ಧರಿಸಿದ ವ್ಯಕ್ತಿಯೊಬ್ಬ ಮನೆಯೊಂದರ ಕಿಟಕಿ ಬಾಗಿಲುಗಳನ್ನು ಎಡತಾಕುತ್ತಿದ್ದಾನೆ. ಬಾಗಿಲು ತೆರೆಯಿರಿ, ಒಳಗೆ ಬಿಟ್ಟುಕೊಳ್ಳಿ ಎಂದು ಅಂಗಲಾಚುತ್ತಿದ್ದಾನೆ. ಅಂಗಲಾಚಿ ಸುಸ್ತಾದಾಗ ಬೀಡಿ ಹಚ್ಚಿ ಸೇದಿ ಅದನ್ನೂ ಎಸೆದಿದ್ದಾನೆ. ಮತ್ತೆ ಬಾಗಿಲು ತೆರೆಯಿರಿ ಎಂದು ಅಂಗಲಾಚುವಿಕೆ ಮುಂದುವರಿಸಿದ್ದಾನೆ. ಹಾಗೆ ಅಂಗಲಾಚುತ್ತಿರುವಾತ ಓರ್ವ ಎಲಕ್ಟ್ರೀಷಿಯನ್. ಆತ ಯಾವುದೋ ಅಪರಾಧ ಮಾಡಿ ಮನೆಯವರಿಂದ ಬಹಿಷ್ಕಾರಕ್ಕೆ ಒಳಗಾಗಿದ್ದಾನೆ. ಅದಕ್ಕಾಗಿಯೇ ಅವನು ತನ್ನನ್ನು ಒಳಕ್ಕೆ ಬಿಟ್ಟುಕೊಳ್ಳಿ ಎಂದು ಅಂಗಲಾಚುತ್ತಿರುವುದು. ಆತ ಮಾಡಿರುವ ಅಪರಾಧ ಏನು ಸಿನಿಮಾದ ಕಥಾಹಂದರವೇನು ಎನ್ನುವುದನ್ನು ನಿರ್ದೇಶಕ ನಟೇಶ್ ಹೆಗಡೆ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. 

ಸದ್ಯದ ಜಗತ್ತಿನಲ್ಲಿ ಮನುಷ್ಯ ಅಕ್ಸೆಪ್ಟೆನ್ಸ್(acceptance)ಗಾಗಿ ಹಪಹಪಿಸಿದ್ದಾನೆ. ತಮ್ಮ ಅಸ್ತಿತ್ವಕ್ಕಾಗಿ ಪಡಿಪಾಟಲು ಪಡುತ್ತಿದ್ದ ಮನುಷ್ಯ ಈಗ ಎಲ್ಲರೂ ತನ್ನನ್ನು ಸ್ವೀಕರಿಸಬೇಕು ಎಂಬ ಜಿದ್ದಿಗೆ ಬಿದ್ದಿದ್ದಾನೆ. ಈ ಸಿನಿಮಾದ ಪ್ರಮುಖ ಪಾತ್ರ ಪೆಡ್ರೊ ಈ ಬಗ್ಗೆ ಬೆಳಕು ಚೆಲ್ಲುತ್ತಾನೆ.

 


Stay up to date on all the latest ಸಿನಿಮಾ ಲೇಖನ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp