
ಬೆಂಗಳೂರು: ದೇಶಾದ್ಯಂತ ಇರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶುಕ್ರವಾರ ಹಬ್ಬ. ಆದರೆ, ಅದು ಕೇವಲ ಹಬ್ಬವಲ್ಲ. ಡಬಲ್ ಸಡಗರ. ಅಂದು ತಮ್ಮ ಆರಾಧ್ಯ ದೈವ ರಜನಿಕಾಂತ್ ಅವರ ಹುಟ್ಟುಹಬ್ಬದ ಖುಷಿ ಒಂದೆಡೆಯಾದರೆ, ಸುಮಾರು ಒಂದು ವರ್ಷದಿಂದ ತಪಸ್ಸಿನಂತೆ ಕಾಯುತ್ತಿದ್ದ ಅವರ ಹೊಸ ಚಿತ್ರ ಲಿಂಗಾ ದೇಶಾದ್ಯಂತ ತೆರೆ ಕಂಡಿದೆ.
ಕನ್ನಡಿಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಶೂಟಿಂಗ್ ಆರಂಭಗೊಂಡಾಗಿನಿಂದ ಈ ವರೆಗೆ ಹಲವಾರು ವಿವಾದಗಳಿಗೆ ಒಳಗಾಗಿದ್ದರೂ, ಇವೆಲ್ಲಾ ಅಡೆತಡೆಗಳನ್ನು ದಾಟಿ ದೇಶದ 2 ಸಾವಿರ ಚಿತ್ರಮಂದಿರಗಳಲ್ಲಿ ಶುಕ್ರವಾರ 'ಲಿಂಗೋದ್ಭವ' ಆಗಿದೆ.
ಬೆಂಗಳೂರಿನಲ್ಲೂ ಬಿಸಿ: ರಾಜಧಾನಿಯಲ್ಲಿ ಚಿತ್ರ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸೋಮವಾರದಿಂದಲೇ ಈ ಚಿತ್ರಕ್ಕಾಗಿ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದ್ದು, ಆನ್‌ಲೈನ್ ನಲ್ಲೂ ಟಿಕೆಟ್ ಮಾರಾಟ ಜೋರಾಗಿ ನಡೆದಿದ್ದು, ಇನ್ನು ತೆಲುಗು, ತಮಿಳು ಜನರಿರುವ ಪ್ರದೇಶಗಳಿಗೆ ಹತ್ತಿರವಿರುವ ಚಿತ್ರಮಂದಿರಗಳು ಈಗಾಗಲೇ ಲಿಂಗಾಕ್ಕಾಗಿ ಬುಕ್ ಆಗಿವೆ. ಬೆಂಗಳೂರಿನಲ್ಲಿ ಕೆಲ ಚಿತ್ರಮಂದಿರಗಳಲ್ಲಿ ಚಿತ್ರದ ಮೊದಲ ಷೋ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಕೆಲವೊಂದು ಮಾಲ್‌ಗಳಲ್ಲಿ ಮೊದಲ ದಿನ 22 ಷೋಗಳನ್ನು ನಡೆಸಲಾಗುತ್ತದೆ.
ಕೆಲ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 5.15ಕ್ಕೇ ಚಿತ್ರದ ಮೊದಲ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ಕೆಲ ಮೂಲಗಳು ಹೇಳಿವೆ. ಉತ್ತರ ಭಾರತದ ಹಿಂದಿ ಹೊರತುಪಡಿಸಿದ ರಜನಿ ಚಿತ್ರವೊಂದು ಹೀಗೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.
ಸೋನಾಕ್ಷಿ, ಅನುಷ್ಕಾ, ಲಾವಣ್ಯ: ಚಿತ್ರದಲ್ಲಿ ಬಾಲಿವುಡ್‌ನ ಸೋನಾಕ್ಷಿ ಸಿನ್ಹಾ ಹಾಗೂ ಅನುಷ್ಕಾ ಶೆಟ್ಟಿ ಚಿತ್ರಕ್ಕೆ ಮತ್ತಷ್ಟು ಗ್ಲಾಮರ್ ತಂದಿದ್ದಾರೆ. ಈ ಇಬ್ಬರೂ ನಾಯಕಿಯರೂ ಈವರೆಗೆ ಸಾಕಷ್ಟು ಹಿಟ್‌ಚಿತ್ರಗಳನ್ನು ಕೊಟ್ಟಿದ್ದಾರಾದರೂ, ರಜನಿ ಜೊತೆಗಿನ ಈ ಚಿತ್ರ ಅವರ ಚಿತ್ರ ಜೀವನಗಳಲ್ಲಿ ದೊಡ್ಡ ಬ್ರೇಕ್ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿ ಇಬ್ಬರೂ ನಾಯಕಿಯರು ಇದ್ದಾರೆ.
ಯಶಸ್ವಿ ಜೋಡಿ: ನಿರ್ದೇಶಕ ಕೆಎಸ್ ರವಿಕುಮಾರ್ ಅವರದ್ದು ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು. ಅತಿ ಹೆಚ್ಚು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎಂಬ ಹಿರಿಮೆ ಅವರದ್ದು. ಕಮಲ್ ಹಾಸನ್ ಅಭಿನಯದ ಆವೈ ಷಣ್ಮುಗಿ, ದಶಾವತಾರಂ, ತೆನಾಲಿ, ಚಿರಂಜೀವಿ ನಟನೆಯ ಸ್ನೇಹಂಕೋಸಂ ಮುಂತಾದ ಹಿಟ್ ಚಿತ್ರಗಳನ್ನು ಕೊಟ್ಟಿರುವ ಅವರು, ರಜನಿಯವರ ಈ ಹಿಂದಿನ ಬ್ಲಾಕ್‌ಬಸ್ಟರ್ ಚಿತ್ರಗಳಾದ ಮುತ್ತು, ಪಡೆಯಪ್ಪ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಗಾಗಿ, ರಜನಿ ಜೊತೆ ಮೂರನೇ ಬಾರಿ ಜೋಡಿಯಾಗುತ್ತಿರುವ ರವಿಕುಮಾರ್ ಅವರು ಸೂಪರ್‌ಸ್ಟಾರ್ ಜೊತೆ ಹ್ಯಾಟ್ರಿಕ್ ಯಶಸ್ಸು ದಾಖಲಿಸುತ್ತಾರೆ ಎಂಬುದು ರಜನಿ ಅಭಿಮಾನಿಗಳ ನಿರೀಕ್ಷೆ.
ಕರ್ನಾಟಕದಲ್ಲಿ ಶೂಟಿಂಗ್: ರಜನಿಕಾಂತ್ ಚಿತ್ರ ಎಂದ ಮೇಲೆ ಕರ್ನಾಟಕದಲ್ಲಿ ಅದರಲ್ಲೂ ಮೈಸೂರು. ಸುತ್ತಲಿನ ತಾಣಗಳಲ್ಲಿ ಒಂದಾದರೂ ದೃಶ್ಯ ಚಿತ್ರೀಕರಣವಾಗುತ್ತದೆ. ಈ ಚಿತ್ರವೂ ಇದಕ್ಕೆ ಹೊರತಲ್ಲ. 'ಲಿಂಗಾ' ಚಿತ್ರದ ಭಾಗಶಃ ಶೂಟಿಂಗ್ ಕರ್ನಾಟಕದಲ್ಲೇ ನಡೆದಿದೆ. ಫಾರ್ ಎ ಚೇಂಜ್ ಈ ಬಾರಿಯ ಚಿತ್ರೀಕರಣ, ಕೇವಲ ಮೈಸೂರು ಮಾತ್ರವಲ್ಲದೇ ಲಿಂಗನಮಕ್ಕಿ ಜಲಾಶಯ, ಸಾಗರದಲ್ಲಿ ನಡೆದಿದೆ.
ದೊಡ್ಡ ಬಜೆಟ್: ಚಿತ್ರಕ್ಕಾಗಿ ಕೋಟ್ಯಾನು ಕೋಟಿ ಹಣವನ್ನು ನೀರಿನಂತೆ ಸುರಿಯಲಾಗಿದೆ. ಹೇಳಿ ಕೇಳಿ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 2ನೇ ನಟ ಎಂಬ ಹೆಗ್ಗಳಿಕೆ ಹೊಂದಿರುವ ರಜನಿಕಾಂತ್ ಚಿತ್ರದಲ್ಲಿರುವುದರಿಂದ ಚಿತ್ರದ ಬಜೆಟ್ ಕೋಟಿಗಟ್ಟಲೆ ಇರುವುದು ಸಹಜ ಎನ್ನುತ್ತಾರೆ ಅಭಿಮಾನಿಗಳು. ಅಲ್ಲದೇ, ಚಿತ್ರಕ್ಕೆ ಎಆರ್ ರೆಹಮಾನ್ ಅವರ ಸಂಗೀತ ಇರುವುದು, ಬಾಲಿವುಡ್‌ನಿಂದ ಸೋನಾಕ್ಷಿ ಸಿನ್ಹಾರನ್ನು ಕರೆತಂದಿರುವುದು, ಅಲ್ಲದೇ, ದೇಶ-ವಿದೇಶದ ಹಲವಾರು ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿರುವುದರಿಂದ ಚಿತ್ರದ ಬಜೆಟ್ ಸಹಜವಾಗಿಯೇ ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ದ್ವಿಪಾತ್ರದಲ್ಲಿ
ರಜನಿಕಾಂತ್ ಅವರದ್ದು ದ್ವಿಪಾತ್ರ. ಚಿತ್ರದಲ್ಲಿ ಸಾಮಾಜಿಕ ಕಳಕಳಿಯುಕ್ತ ನಾಯಕನ ಪಾತ್ರ.
3 ಭಾಷೆಗಳಲ್ಲಿ
ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲೂ ಚಿತ್ರತಯಾರಿಸಲಾಗಿದೆ. ಸಧ್ಯಕ್ಕೆ ಡಿ.12ರಂದು ತಮಿಳು ಹಾಗೂ ತೆಲುಗು ಆವೃತ್ತಿಗಳು ಬಿಡುಗಡೆಗೊಂಡಿದ್ದು, ಹಿಂದಿ ಆವೃತ್ತಿಯನ್ನು ಕೆಲ ದಿನಗಳ ನಂತರ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
ಎಷ್ಟು ಚಿತ್ರಮಂದಿರ?
ತಮಿಳುನಾಡಿನಲ್ಲಿ 600 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶದಲ್ಲಿ 750 ಚಿತ್ರಮಂದಿರಗಳಲ್ಲಿ, ಕರ್ನಾಟಕದ 225 ಚಿತ್ರಮಂದಿರಗಳಲ್ಲಿ, ತಮಿಳರು ಮತ್ತು ತೆಲುಗಿಗರು ಇರುವ ನಗರಗಳಲ್ಲಿ 450 ರಿಂದ 500 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿದೆ.
ಸಾಕಷ್ಟು ನಿರೀಕ್ಷೆಯೊಂದಿಗೆ ಚಿತ್ರ ತಯಾರಿಸಿದ್ದೇನೆ. ಈ ವರೆಗಿನ ರಜನಿಕಾಂತ್ ಚಿತ್ರಗಳಿಗಿಂತ ವಿಭಿನ್ನವಾಗಿ ಚಿತ್ರ ಮೂಡಿದೆ. ಪ್ರೇಕ್ಷಕರು ಹಾರೈಸುತ್ತಾರೆಂಬ ವಿಶ್ವಾಸವಿದೆ.
-ರಾಕ್‌ಲೈನ್ ವೆಂಕಟೇಶ್
ಲಿಂಗಾ ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement