ಐಪಿಎಲ್‍ಗೆ ಸೆಡ್ಡು ಹೊಡೆಯಲಿರುವ ಪುನೀತ್ ಚಿತ್ರ

ಪುನೀತ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ ಎಂಬ ಸುದ್ದಿಯ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿರುವ ರಣವಿಕ್ರಮ ಚಿತ್ರ ಏಪ್ರಿಲ್ ಹತ್ತರಂದು ಬಿಡುಗಡೆಯಾಗುವುದು ಖಚಿತವಾಗಿದೆ...
ರಣ ವಿಕ್ರಮ ಚಿತ್ರದ ಪೋಸ್ಟರ್
ರಣ ವಿಕ್ರಮ ಚಿತ್ರದ ಪೋಸ್ಟರ್

ಪುನೀತ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ ಎಂಬ ಸುದ್ದಿಯ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿರುವ ರಣವಿಕ್ರಮ ಚಿತ್ರ ಏಪ್ರಿಲ್ ಹತ್ತರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಎರಡುವಾರ ಮುಂದಕ್ಕೆ ಹೋಗಬಹುದು, ರಾಜ್ ಹುಟ್ಟುಹಬ್ಬದಂದು ಬಿಡುಗಡೆಯಾಗಬಹುದು ಎಂಬೆಲ್ಲ ಊಹಾಪೋಹಗಳ ನಡುವೆಯೇ ಸಂತೋಷ್ ಚಿತ್ರಮಂದಿರ ರಣವಿಕ್ರಮನನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ಸಂತೋಷ್ ಚಿತ್ರಮಂದಿರದೊಂದಿಗೆ ಒಟ್ಟು ಇನ್ನೂರ ಐವತ್ತಕ್ಕೂ ಹೆಚ್ಚು ಥೇಟರುಗಳಲ್ಲಿ ತೆರೆಕಾಣಲಿರುವ ರಣವಿಕ್ರಮ ಇತರೆ ರಾಜ್ಯಗಳಲ್ಲಿಯೂ ಏಕಕಾಲದಲ್ಲಿ ತೆರೆಕಾಣುವ ಸುದ್ದಿಯಿದೆ. ಯು/ಎ ಪ್ರಮಾಣ ಪತ್ರ  ಪಡೆದಿರುವ ರಣವಿಕ್ರಮದಲ್ಲಿ ಅಪ್ಪು ಪೊಲೀಸ್ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಟಿಲ್ ಮತ್ತು ಪೋಸ್ಟರುಗಳಿಂದ ಗೊತ್ತಾಗಿರುವ ಸುದ್ದಿ. ಆದರೆ ಇನ್ನೊಂದು ಪಾತ್ರ ಏನು ಎಂಬುದು ಮಾತ್ರ ಸದ್ಯದ ಸಸ್ಪೆನ್ಸ್.

ಅದಾಹ್ ಶರ್ಮಾ ಮತ್ತು ಅಂಜಲಿ ಇಬ್ಬರು ಪುನೀತ್‍ಗೆ ನಾಯಕಿಯರು. ಪರ್ವ ಮತ್ತು ಮೈತ್ರಿ ಚಿತ್ರದ ಅಮೋಘ ಯಶಸ್ಸು ಪುನೀತ್‍ರನ್ನು ಮತ್ತೆ ನಂಬರ್ ಒನ್ ಸ್ಥಾನಕ್ಕೆ ನಿಲ್ಲಿಸಿದ್ದು, ರಣವಿಕ್ರಮ ಮೂಲಕ ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪರ್ವ ಕೂಡ ಸಂತೋಷ್ ಥೇಟರಿನಲ್ಲಿಯೇ ನೂರು ದಿನ ಆಚರಿಸಿತ್ತು. ಸದ್ಯಕ್ಕೆ ತನ್ನ ಕೊನೆಯ ವಾರದ ಓಟದಲ್ಲಿರುವ ರಾಮಾಚಾರಿ ಚಿತ್ರವೂ ಸಂತೋಷ್‍ನಲ್ಲಿ ನೂರು ದಿನ ಪೂರೈಸಿದೆ.

ಅಲ್ಲಿಗೆ ಸಂತೋಷ್ ಚಿತ್ರಮಂದಿರಕ್ಕೂ ಇದು ಹ್ಯಾಟ್ರಿಕ್ ಅನ್ನಲಡ್ಡಿಯಿಲ್ಲ. ಪವನ್ ಒಡೆಯರ್‍ಗೂ ಗೋವಿಂದಾಯ ನಮಃ ಮತ್ತು ಗೂಗ್ಲಿ ನಂತರ ರಣವಿಕ್ರಮ ಗೆದ್ದರೆ ಹ್ಯಾಟ್ರಿಕ್ ಗಳಿಸುವ ಸಾಧ್ಯತೆ. ಹಾಡುಗಳು ಈಗಾಗಲೇ ಒಂದು ಸುತ್ತಿನ ಹವಾ ಸೃಷ್ಟಿಸಿದ್ದು, ಐಪಿಎಲ್ ಭರಾಟೆಯನ್ನೂ ಲೆಕ್ಕಿಸದೆ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿರುವುದು ಚಿತ್ರದ ಮೇಲೆ ತಂಡಕ್ಕಿರುವ ನಂಬಿಕೆಯನ್ನು ಸೂಚಿಸುತ್ತಿದೆ. ಇತ್ತ ಈ ವಾರ ಬಿಡುಗಡೆಯಾಗಿರುವ ವಾಸ್ತುಪ್ರಕಾರ ಮೂರೇ ದಿನದಲ್ಲಿ ಮೂರುವರೆ ಕೋಟಿ ಗಳಿಸಿದ್ದರೆ, ಎರಡು ವಾರದಲ್ಲಿ ಕೃಷ್ಣಲೀಲ ಕೂಡ ಆರುಕೋಟಿ ದಾಟಿದೆ ಎಂಬ ಲೆಕ್ಕಗಳು ಸಿಗುತ್ತಿವೆ. ಒಟ್ಟಾರೆಯಾಗಿ ಈ  ವರ್ಷದ ಆರಂಭದಿಂದ ಸರಾಸರಿ ತಿಂಗಳಿಗೊಂದರಂತೆ ಹಿಟ್ ಚಿತ್ರಗಳು ಬರುತ್ತಿರುವುದು ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯ ಸೂಚನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com