
ಬೆಂಗಳೂರು: ‘ನಾನು ನನ್ನ ಬಾಲ್ಯವನ್ನು ಇದೇ ಊರಿನಲ್ಲಿ ಕಳೆದಿದ್ದೇನೆ. ನನ್ನ ಅಜ್ಜಿ ಮನೆ ಸಂಬಂಧಿಕರೂ ಇಲ್ಲಿ ಇದ್ದಾರೆ. ಹಾಗಾಗಿ ಇಲ್ಲಿ ಮನೆಯೊಂದನ್ನು ಕಟ್ಟಿ ನನ್ನ ಮಕ್ಕಳ ಜೊತೆ ಸಂಬಂಧಿಕರ ಜೊತೆ ಕೆಲವು ಕಾಲ ಕಳೆಯಬೇಕು ಎಂಬ ಆಸೆ ನನಗಿದೆ' ಹೀಗೆಂದು ಹೇಳಿದ್ದು ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್.
ಬೆಂಗಳೂರಿನ ಐಐಎಂ-ಬಿ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿರುವ ನಾಯಕತ್ವ ಶೃಂಗ 'ಇಂಬ್ಯೂ'ನ ಉಧ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪ್ರೇಕ್ಷಕರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ, ನಾನು ಬಾಲ್ಯವನ್ನು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಳೆದಿದ್ದೇನೆ. ನಾನು ಚಿಕ್ಕವನಿರುವಾಗ ಬೆಂಗಳೂರಿನ ಹವಾಮಾನ ಇದಕ್ಕಿಂತಲೂ ಸುಂದರವಾಗಿತ್ತು, ಇಲ್ಲಿ ನನ್ನ ಅಜ್ಜಿ ಮನೆಯಿತ್ತು. ಅದನ್ನು ಇನ್ನು ಪುನಃ ನಿರ್ಮಿಸಿ ಅಲ್ಲಿ ನನ್ನ ಕುಟುಂಬದವರ ಜೊತೆ ಕಾಲ ಕಳೆಯುವ ಇಚ್ಛೆಯಿದೆ ಎಂದರು.
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಸಂಸದ ಶಶಿ ತರೂರ್ ಶಾರುಖ್‌ರನ್ನು ಪ್ರಶ್ನಿಸಿ, ‘ಸಾಮಾಜಿಕ ಜಾಲತಾಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಎಂದು ಕೇಳಿದರು. ‘ಅದೊಂಥರಾ ಪ್ರೇಮ ಸಂಬಂಧ ಇದ್ದಂತೆ!’ಮೊದಲಿಗೆ ಅಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ನಂತರ ಎಲ್ಲದರ ಬಗ್ಗೆಯೂ ಅಪಸ್ವರ ಆರಂಭವಾಗುತ್ತದೆ. ಟ್ವಿಟರ್, ಫೇಸ್‌ಬುಕ್‌ಗಳ ಕತೆ ಕೂಡ ಇಷ್ಟೆ. ಒಮ್ಮೆ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಪಡೆದ ನಂತರ ಅವುಗಳ ಬಗ್ಗೆ ದೂರಿ ಪ್ರಯೋಜನ ಇಲ್ಲ. ‘ನಿಮಗೆ ಇರುವಂಥ ಮಾತಿನ ಹಕ್ಕು ಅಲ್ಲಿ ಎಲ್ಲರಿಗೂ ಇರುತ್ತದೆ. ನಾನು ಮಾತ್ರ ಇಲ್ಲಿ ಮಾತನಾಡುವೆ, ನೀವು ಮಾತನಾಡಬಾರದು’ ಎಂದು ಹೇಳಲಾಗುವುದಿಲ್ಲ ಎಂದರು.
ನನಗೆ ಇಷ್ಟವಾದ ಚಿತ್ರಗಳನ್ನು ಮಾಡುವುದು ನನ್ನ ಇಚ್ಚೆ. ಬಾಝಿಗರ್, ಢರ್, ಕಭಿ ಹಾಂ ಕಭಿ ನಾ ಮೊದಲಾದ ಚಿತ್ರಗಳು ನನ್ನ ವೃತ್ತಿ ಜೀವನವನ್ನೇ ಬದಲಿಸಿದವು. ಮೊದಲು ಬೇಡ ಎನಿಸಿದ್ದ, ಕಷ್ಟ ಎನಿಸಿದ್ದ ‘ಪ್ರೀತಿ–ಪ್ರೇಮ ಇರುವ ಚಿತ್ರಗಳಲ್ಲಿ ನಟಿಸುವುದು ನಂತರ ಸುಲಭವಾಯಿತು. ಅದರಿಂದ ಜೀವನಕ್ಕೆ ಬೇಕಾದ ಅಂಶಗಳನ್ನು ಕೂಡ ಕಲಿತುಕೊಂಡೆ. ಹಾಗಾಗಿ ನಿಮಗೆ ಬೇಡ ಅಂತ ಅನಿಸಿದ್ದನ್ನೂ ಮಾಡಿ, ಅದರಲ್ಲಿ ಕಲಿಯುವುದು ಬೇಕಾದಷ್ಟಿರುತ್ತದೆ ಎಂದು ನುಡಿದರು.
Advertisement