

ಬೆಂಗಳೂರು: ಡೈಲಾಗ್ ಕಿಂಗ್, ನಟ ಸಾಯಿಕುಮಾರ್ ಅವರ ಸಹೋದರ ಖ್ಯಾತ ಖಳನಟ ರವಿಶಂಕರ್ ಅವರು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಗೊಳ್ಳುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಟ ಸಾಯಿಕುಮಾರ್ ಅವರು ಈಗಾಗಲೇ ಬಿಜೆಪಿ ಪಕ್ಷದ ಸದಸ್ಯರಾಗಿದ್ದು, ಇದೇ ಹಾದಿ ತುಳಿದಿರುವ ರವಿಶಂಕರ್ ಇದೀಗ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ತನಗೆ ಬಿಜೆಪಿ ಬಗ್ಗೆ ವಿಶೇಷ ಒಲವಿರುವುದರಿಂದ ತಾನು ಈ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ರವಿಶಂಕರ್ ಈಗಾಗಲೇ ಮಾತುಕತೆ ನಡೆಸಿದ್ದು, ರವಿಶಂಕರ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ದಿನಾಂಕವನ್ನು ವರಿಷ್ಠರು ಇನ್ನಷ್ಟೇ ತೀರ್ಮಾನಿಸಬೇಕಿದೆ.
ತೆಲುಗು, ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದರಾಗಿ ಹೆಸರು ಮಾಡಿದ್ದ ರವಿಶಂಕರ್ ಅವರ ನಟನಾ ಪ್ರತಿಭೆಯನ್ನು ಚಿತ್ರಲೋಕಕ್ಕೆ ಪರಿಚಯಿಸಿದ್ದು ಮಾತ್ರ ಕನ್ನಡ ಚಿತ್ರರಂಗ. ಹಾಗಾಗಿ ತನಗೆ ವೃತ್ತಿಜೀವನದಲ್ಲಿ ಮರುಹುಟ್ಟು ನೀಡಿದ ಕನ್ನಡ ಚಿತ್ರರಂಗದ ಮೇಲಿನ ವಿಶೇಷ ಅಭಿಮಾನದಿಂದ ನಟ ರವಿಶಂಕರ್ ಅವರು ಪ್ರಸ್ತುತ ತಮ್ಮ ಕುಟುಂಬ ವರ್ಗದವರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.
Advertisement