11ರಿಂದ ಚಿತ್ರೀಕರಣ ಸ್ಥಗಿತ ಬೆದರಿಕೆ

ಕಲಾವಿದರು, ಚಿತ್ರ ನಿರ್ಮಾಪಕರ ನಡುವಿನ ಬಿಕ್ಕಟ್ಟು ಇನ್ನಷ್ಟು ಕಗ್ಗಂಟ್ಟಾಗಿ ಪರಿಣಮಿಸಿದೆ. ನಿರ್ಮಾಪಕರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಭಾನುವಾರ ನಡೆದ ಸಭೆ ಯಾವುದೇ ನಿರ್ಧಾರಕ್ಕೆ ಬಾರದೆ ಮುಕ್ತಾಯವಾಯಿತು...
ನಿರ್ಮಾಪಕರ ಸಮಸ್ಯೆ ಕುರಿತಂತೆ ಭಾನುವಾರ ಫಿಲ್ಮ್ ಚೇಂಬರ್‍ನಲ್ಲಿ ಸಭೆಗೆ ಮುನ್ನ ಚಿತ್ರನಟರೆಲ್ಲಾ ಸೆಲ್ಫೀ ತೆಗೆಸಿಕೊಂಡಿದ್ದು ಹೀಗೆ.
ನಿರ್ಮಾಪಕರ ಸಮಸ್ಯೆ ಕುರಿತಂತೆ ಭಾನುವಾರ ಫಿಲ್ಮ್ ಚೇಂಬರ್‍ನಲ್ಲಿ ಸಭೆಗೆ ಮುನ್ನ ಚಿತ್ರನಟರೆಲ್ಲಾ ಸೆಲ್ಫೀ ತೆಗೆಸಿಕೊಂಡಿದ್ದು ಹೀಗೆ.

ಬೆಂಗಳೂರು: ಕಲಾವಿದರು, ಚಿತ್ರ ನಿರ್ಮಾಪಕರ ನಡುವಿನ ಬಿಕ್ಕಟ್ಟು ಇನ್ನಷ್ಟು ಕಗ್ಗಂಟ್ಟಾಗಿ ಪರಿಣಮಿಸಿದೆ.  ನಿರ್ಮಾಪಕರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಭಾನುವಾರ ನಡೆದ ಸಭೆ ಯಾವುದೇ ನಿರ್ಧಾರಕ್ಕೆ ಬಾರದೆ ಮುಕ್ತಾಯವಾಯಿತು. ಅಷ್ಟೇ ಅಲ್ಲ ಸಭೆ ನಂತರ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಮತ್ತು ಧರಣಿ ನಿರತ ನಿರ್ಮಾಪಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಅಂಬರೀಷ್ ವರ್ತನೆಯಿಂದ ಸಿಟ್ಟಾದ ನಿರ್ಮಾಪಕರು, ಬೇಡಿಕೆ ಈಡೇರದಿದ್ದರೆ ಜೂ.11 ರಿಂದ ಚಿತ್ರೀಕರಣ ಸ್ಥಗಿತಗೊಳಿಸಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದರು.

ಸಭೆ ವಿಫಲ: ಕಲಾವಿದರ ಕ್ಯಾರವಾನ್ ಬಳಕೆ, ಸಹಾಯಕರ ನೇಮಕ ಮತ್ತು ಸಂಭಾವನೆ ಕಡಿಮೆ ಪಡೆಯಬೇಕೆಂಬುದು ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತಾಯಿಸಿ ನಿರ್ಮಾಪಕರು ನಡೆಸುತ್ತಿರುವ ಧರಣಿಗೆ ತಾರ್ಕಿಕ ಅಂತ್ಯ ಕಾಣಿಸಲು ಭಾನುವಾರ ಸಂಜೆ ವಾಣಿಜ್ಯ ಮಂಡಳಿ ಸಂಭಾಗದಲ್ಲಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.

ಸಂಜೆ 4.30ಕ್ಕೆ ಈ ಸಭೆ ನಿಗದಿ ಆಗಿತ್ತು. ಈ ವೇಳೆಗಾಗಲೇ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ನಟ ಶಿವರಾಜ್ ಕುಮಾರ್, ಹಿರಿಯ ನಟಿ ಬಿ. ಸರೋಜದೇವಿ ತುರ್ತು ಕಾರ್ಯಕ್ರಮಗಳ ನೆಪದಲ್ಲಿ ಹೊರಟು ಹೋಗಿದ್ದರು. ಉಳಿದವರು ಅಂಬರೀಷ್‍ಗಾಗಿ ಕಾದು ತಾಳ್ಮೆ ಕಳೆದುಕೊಂಡಿದ್ದರು. . ಸಂಜೆ 6.15ಕ್ಕೆ ಅಂಬರೀಷ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸಭೆಗೆ ಆಗಮಿಸಿದರು.

ನಿರ್ಮಾಪಕರಾದ ಕೆ.ಮಂಜು, ಸಾ.ರಾ. ಗೋವಿಂದು, ಸುಂದರಾಜ್, ಹಿರಿಯ ನಟಿಯರಾದ ಜಯಮಾಲಾ, ಪ್ರಮೀಳಾ ಜೋಷಾಯ್, ನಟ ಜಗ್ಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಿರ್ಮಾಪಕರ ಬೇಡಿಕೆಗಳನ್ನು ಬಗೆಹರಿಸುವ ಸಂಬಂಧ ಸುಮಾರು 2 ತಾಸುಗಳ ಕಾಲ ಸಭೆ ಸುದೀರ್ಘವಾಗಿ ಚರ್ಚೆ ನಡೆಸಿತು. ಸಭೆಯ ನಂತರ ಅಂಬರೀಷ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ಮಾಪಕರ ಬೇಡಿಕೆ ಬಗೆಹರಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನಾಳೆ ಅಥವಾ ನಾಡಿದ್ದು ಕಲಾವಿದರೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದರು.ಧರಣಿ ನಿರತ ನಿರ್ಮಾಪಕರು ಜೂ.10ರೊಳಗೆ ಬೇಡಿಕೆ ಈಡೇರಿಸಬೇಕೆಂದು ಗಡುವು ನೀಡಿದ್ದಾರೆ. ಆ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಸದ್ಯಕ್ಕೆ ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿ ನಂತರ ಅವರು, ಧರಣಿ ನಿರತ ನಿರ್ಮಾಪಕರೊಂದಿಗೆ ಚರ್ಚೆ ನಡೆಸಲು ಬಂದಾಗ, ಮಾಧ್ಯಮ ಪ್ರತಿನಿಧಿಗಳ ಎದುರಲ್ಲೇ, ನಿರ್ಮಾಪಕರು ಮತ್ತು ಅಂಬರೀಷ್ ನಡುವೆ ಮಾತಿನ ಚಕಮಕಿ ನಡೆಯಿತು. ನಿರ್ಮಾಪಕರು ಧರಣಿ ನಡೆಸುತ್ತಿದ್ದರೂ ಯಾವುದೇ ಕಲಾವಿದರು ಬಂದಿಲ್ಲ. ತಮ್ಮ ಕಷ್ಟ     ಏನೆಂಗು ಕೇಳಿಲ್ಲ. ಸಣ್ಣ ಪುಟ್ಟ ನಿರ್ಮಾಕರನ್ನು ಕಡೆಗಣಿಸಲಾಗುತ್ತಿದೆ ಎಂದು ವಿವರಿಸಿದರು

ಈ ಹಂತದಲ್ಲಿ ಸಿಟ್ಟಾದ ಅಂಬರೀಷ್, `ನೀವು ಎಷ್ಟು ಮಂದಿ ನಿರ್ಮಾಪಕರದ್ದೀರಿ...ನೀವೆಷ್ಟು ಸಿನಿಮಾ ಮಾಡಿದ್ದೀರಿ' ಎಂದು ಪ್ರಶ್ನಿಸಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಆಕ್ರೋಶಗೊಂಡ ನಿರ್ಮಾಪಕ ಕೃಷ್ಣೇಗೌಡ ಸೇರಿದಂತೆ ಕೆಲವರು, `ಆ ರೀತಿ ಪ್ರಶ್ನೆ ಮಾಡಬೇಡಿ. ಅನೇಕ ಸಿನಿಮಾ ಮಾಡಿದ್ದೇವೆ' ಎಂದು ಏರುಧ್ವನಿಯಲ್ಲಿಯೇ ಉತ್ತರಿಸಿದರು. ನಟ ಜಗ್ಗೇಶ್ ಮಧ್ಯ ಪ್ರವೇಶಿಸಿದರು.

`ಮಾಧ್ಯಮದ ಮುಂದೆ ಈ ಗಲಾಟೆ ಬೇಡ, ದಯವಿಟ್ಟು ನಿಲ್ಲಿಸಿ' ಎಂದು ಅಂಬರೀಷ್ ಅವರನ್ನು ಸುಮ್ಮನಿರಿಸಿದರು. ಮತ್ತೆ ಚರ್ಚೆ ಮುಂದುವರೆಸದೆ, ಅಂಬರೀಷ್ ಅಲ್ಲಿಂದ ಹೊರಟು ಹೋದರು.ಪರಿಸ್ಥಿತಿ ತಿಳಿಯಾದ ನಂತರ ನಿರ್ಮಾಪಕರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ಕಲಾವಿದರ, ಸಂಘದ ಅಧ್ಯಕ್ಷರಾದ ಅಂಬರೀಷ್ ಮುಂದೆ ಸಮಸ್ಯೆಗಳನ್ನು ಮುಂದಿಟ್ಟಿದ್ದೇವೆ. ಅವರು ಕೂಡ ತಾಳ್ಮೆಯಿಂದ ಎಲ್ಲವನ್ನು ಆಲಿಸಿ, ಜೂ.10ರೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಅಲ್ಲಿಯತನಕ ಶಾಂತಿಯಿಂದ ಧರಣಿ ನಡೆಸೋಣ. ಬೇಡಿಕೆ ಈಡೇರದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸೋಣ ಎಂದು ಧರಣಿ ನಿರತರಲ್ಲಿ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com