ರಾಜಕೀಯಕ್ಕಾಗಿ ಮಗನ ಚಿತ್ರ ತಯಾರಿಸುತ್ತಿಲ್ಲ: ಎಚ್ ಡಿ ಕುಮಾರಸ್ವಾಮಿ

ಮಗ ನಿಖಿಲ್ ಗೌಡನನ್ನು ರಾಜಕೀಯಕ್ಕೆ ತರುವ ಉದ್ದೇಶದಿಂದ ಚಿತ್ರ ತಯಾರಿಸುತ್ತಿಲ್ಲ ಎಂದು ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಗೌಡ
ಎಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಗೌಡ
Updated on

ಬೆಂಗಳೂರು: ಮಗ ನಿಖಿಲ್ ಗೌಡನನ್ನು ರಾಜಕೀಯಕ್ಕೆ ತರುವ ಉದ್ದೇಶದಿಂದ ಚಿತ್ರ ತಯಾರಿಸುತ್ತಿಲ್ಲ ಎಂದು ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಪುತ್ರನನ್ನು ರಾಜಕೀಯಕ್ಕೆ ತರುವ ಉದ್ದೇಶದಿಂದ ನಾನು ಆತನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿಲ್ಲ. ಆತನೇ ಮುಂದೆ ಬಂದು ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದಾಗ ಸಂತೋಷದಿಂದ ಚಿತ್ರ ಮಾಡಲು ಒಪ್ಪಿದೆ ಎಂದು ಹೇಳಿದರು.

"ನನ್ನ ಪುತ್ರ ನಿಖಿಲ್ ಚಲನಚಿತ್ರರಂಗದಲ್ಲಿ ತೊಡಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ನಾನು ಎಂದಿಗೂ ಆತನ ಮೇಲೆ ಈ ಬಗ್ಗೆ ಒತ್ತಡ ಹೇರಿರಲಿಲ್ಲ. ಈಗ ಆತನೇ ಮುಂದೆ ಸಿನಿಮಾದಲ್ಲಿ ನಟಿಸುವ ಕುರಿತು ಆಸಕ್ತಿ ತೋರಿದ್ದಾನೆ. ಹೀಗಾಗಿ ಜಾಗ್ವಾರ್ ಚಿತ್ರ ಸೆಟ್ಟೇರುತ್ತಿದೆ. ರಾಜಕಾರಣದಲ್ಲಿದ್ದರೂ ನನ್ನ ಆಸಕ್ತಿ ಚಲನಚಿತ್ರ ಕ್ಷೇತ್ರದತ್ತಲೇ. ರಾಜಕೀಯದಲ್ಲಿ ತಲ್ಲೀನನಾಗಿದ್ದರಿಂದ ಸಿನಿಮಾ ಕ್ಷೇತ್ರದಿಂದ ಸ್ವಲ್ಪ ಕಾಲ ದೂರವಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

"ನನ್ನ ಮಗನ ಸಿನಿಮಾ ಎಂದ ಮಾತ್ರಕ್ಕೆ ಅನಗತ್ಯವಾಗಿ ಹಣ ವೆಚ್ಚ ಮಾಡುವುದಿಲ್ಲ. ಚಿತ್ರೀಕರಣಕ್ಕೆ ವಿದೇಶಕ್ಕೂ ಹೋಗುವುದಿಲ್ಲ. ಸಿನಿಮಾ ಏನು ಕೇಳುತ್ತದೋ ಅಷ್ಟನ್ನು ಮಾತ್ರ ಖರ್ಚು ಮಾಡುತ್ತೇನೆ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರ ತೆಕ್ಕೆಗೆ ನನ್ನ ಮಗನನ್ನು ಹಾಕಿದ್ದೇನೆ. ಅವರು ಆತನನ್ನು ಕಲ್ಲುಕೆತ್ತಿ ಶಿಲೆ ಮಾಡಿದಂತೆ ಮಾಡಲಿದ್ದಾರೆ, ಅವರ ಸಲಹೆಯಂತೆ ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ಮಾಡಲಿದ್ದೇನೆ ಎಂದು ಕುಮಾರ ಸ್ವಾಮಿ ಹೇಳಿದರು.

ಜಾಗ್ವಾರ್ ಚಿತ್ರಕ್ಕೆ ಸುಮಾರು 10 ರಿಂದ 15 ಕೋಟಿ ಬಂಡವಾಳ ಹೂಡುವ ಕುರಿತು ಯೋಜನೆ ಹಾಕಿಕೊಂಡಿದ್ದು, ಬೆಂಗಳೂರು, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಬರುವ ಆಗಸ್ಟ್ 2ರಂದು ಚಿತ್ರೀಕರಣ ಆರಂಭಗೊಳ್ಳಲಿದೆ. ನನ್ನ ಮಗ ನಿಖಿಲ್ ಗೌಡ ಅತ್ಯುತ್ತಮ ನಟನಾಗಿ ಕನ್ನಡದ ಖ್ಯಾತ ನಟರಂತೆ ಬೆಳೆಯಬೇಕೆನ್ನುವುದು ನನ್ನ ಆಸೆಯಾಗಿದೆ. ಜಾಗ್ವಾರ್ ಟೈಟಲ್ ಟೇಸಿ ವೆಂಕಟೇಶ್ ಅವರ ಬಳಿಯಿತ್ತು. ನನ್ನ ಮಗನ ಸಿನಿಮಾಕ್ಕೆ ಅದೇ ಹೆಸರು ಇಡಬೇಕೆಂದು ಕೋರಿದ್ದಕ್ಕೆ ವೆಂಕಟೇಶ್ ಅವರು ಮನಃಪೂರ್ವಕವಾಗಿ ಒಪ್ಪಿಕೊಂಡು ಸಹಕರಿಸಿದರು ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.

ಒಟ್ಟಾರೆ ಕುಮಾರಸ್ವಾಮಿ ಅವರ ಮಗ ನಿಖಿಲ್ ಗೌಡ ಅವರ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಅಪ್ಪು ಖ್ಯಾತಿಯ ನಿರ್ದೇಶಕ ಪೂರಿ ಜಗನ್ನಾಥ್ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಕುಮಾರಸ್ವಾಮಿ ಅವರ ನಿರೀಕ್ಷೆಯನ್ನು ಉಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com