
ಬೆಂಗಳೂರು: ರಿಮೇಕ್ ಗಳ ಸುರಿಮಳೆಯನ್ನೇ ಸುರಿಸುತ್ತಿರುವ ಕನ್ನಡದ ಕಿಚ್ಚ ಸುದೀಪ್ ಮಾಣಿಕ್ಯ (ತೆಲುಗು: ಮಿರ್ಚಿ) ಮತ್ತು ರನ್ನ (ತೆಲುಗು: ಅತ್ತಾರಿಂಟಿಕಿ ದಾರೇಧಿ) ಸಿನೆಮಾಗಳ ಯಶಸ್ಸನ್ನು ಮುಂದುವರೆಸಲು ಈಗ ೨೦೧೩ ರ ಮತ್ತೊಂದು ತೆಲುಗು ಸಿನೆಮಾ 'ಬಲುಪು' (ಕನ್ನಡ ಅರ್ಥ: ಸೊಕ್ಕು) ಕನ್ನಡ ಅವತರಿಣಿಕೆಗೆ ಸಿದ್ಧರಾಗುತ್ತಿದ್ದಾರೆ.
ಮೂಲಗಳ ಪ್ರಕಾರ ಈ ಸಿನೆಮಾದ ನಿರ್ಮಾಪಕ ಎನ್ ಕುಮಾರ್ ಮಂಗಳವಾರ ಹೈದರಾಬಾದ್ ಗೆ ದೌಡಾಯಿಸಿದ್ದು ರಿಮೇಕ್ ಹಕ್ಕುಗಳನ್ನು ಕೊಳ್ಳುವುದಕ್ಕೆ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಚಲನಚಿತ್ರದ ಮುಹೂರ್ತ ಮಾಣಿಕ್ಯ ನಟನ ಹುಟ್ಟುಹಬ್ಬದ ದಿನ ಸೆಪ್ಟಂಬರ್ ೨ ಕ್ಕೆ ನಡೆಯಲಿದೆ.
ಈ ಸಿನೆಮಾವನ್ನು ಸುದೀಪ್ ಅವರೇ ನಿರ್ದೇಶಿಸಲಿದ್ದು, ಮೂಲದಲ್ಲಿ ಪ್ರಕಾಶ್ ರಾಜ್ ಮಾಡಿದ ಪಾತ್ರವನ್ನು ಕನ್ನಡ ಅವತರಿಣಿಕೆಯಲ್ಲಿ ಮತೊಬ್ಬ ರಿಮೇಕ್ ಸ್ಪೆಷಲಿಸ್ಟ್ ರವಿಚಂದ್ರನ್ ನಿರ್ವಹಿಸಲಿದ್ದಾರೆ ಎಂದು ತಿಳಿಯಲಾಗಿದೆ.
ಈ ನಡುವೆ ಸುದೀಪ್ ಅವರು ಎರಡು ಯೋಜನೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಎಸ್ ಕೃಷ್ಣ ಅವರ 'ಹೆಬ್ಬುಲಿ' ಮತ್ತು ಇನ್ನು ಹೆಸರಿಡಬೇಕಾದ ಕೆ ಎಸ್ ರವಿ ಕುಮಾರ್ ಅವರ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ನಂತರ ಮಿಲನ ಪ್ರಕಾಶ್ ಅವರ ಸಿನೆಮಾವೊಂದರಲ್ಲಿ ನಟಿಸಲಿದ್ದಾರೆ. ಜಿಗರ್ಥಂಡದ ರಿಮೇಕ್ ಸಿನೆಮಾವನ್ನು ಸುದೀಪ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಇದೆ.
Advertisement