
ಯಶ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸೋಕೆ ಎರಡು ಸುದ್ದಿಗಳು ಇಲ್ಲಿವೆ. ಈ
ವರ್ಷದ ಸೂಪರ್ ಹಿಟ್ ಚಿತ್ರ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದೆ.
ಮೈನಾ ಮತ್ತು ಮೈತ್ರಿ ಚಿತ್ರಗಳ ಯಶಸ್ವಿ ನಿರ್ಮಾಪಕ ರಾಜ್‍ಕುಮಾರ್ ಈ ಚಿತ್ರವನ್ನು ತೆಲುಗಿಗೆ ಕೊಂಡೊಯ್ಯಲಿದ್ದಾರೆ. ಐವತ್ತು ದಿನಗಳ ಯಶಸ್ವಿ ಪ್ರದರ್ಶನದಲ್ಲಿ ಇಪ್ಪತ್ತೈದು ಬಾಚಿರುವ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ ರೀಮೇಕ್‍ನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಅಕ್ಕನ ಮಗ ಸಾಯಿ ಧರಮ್ ತೇಜ್ ನಾಯಕನಾಗುತ್ತಿದ್ದಾನೆ.
ಆ ರಾಮಾಚಾರಿ ತಮಿಳಿನಿಂದ ಕನ್ನಡಕ್ಕೆ ಬಂದು ಹಿಟ್ ಆಗಿದ್ದರೆ, ಈ ರಾಮಾಚಾರಿ ಇಲ್ಲಿ ಹಿಟ್ ಆಗಿ ತೆಲುಗಿಗೆ ಹೋಗುತ್ತಿರುವುದು ವಿಶೇಷ. ರಾಮಾಚಾರಿ ಪಾತ್ರವಿರುವ ಎಲ್ಲ ಚಿತ್ರಗಳೂ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪಯಣಿಸುವುದು ಮಾಮೂಲಿಯಾಗಿ ಹೋಗಿದೆ ಎಂಬುದು ಗಮನಾರ್ಹ!
ಈ ಹಿಂದೆ ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದ ರಾಮಾಚಾರಿಯೂ ಕೋಡೇ ನಾಗು ಎಂಬ ಹೆಸರಲ್ಲಿ ತೆಲುಗಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಬಹುದು. ಇನ್ನೊಂದು ಸುದ್ದಿಯೊಂದರೆ, ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಮಾಸ್ಟರ್ ಪೀಸ್ ಶೂಟಿಂಗ್ ಶುರುವಾಗುತ್ತಿರುವುದು. ಸಂಭಾಷಣಕಾರ ಮಂಜು ಮಾಂಡವ್ಯ ಮೊದಲಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮಾರ್ಚ್ ಒಂಬತ್ತಕ್ಕೆ ಚಾಲನೆ ಸಿಗಲಿದೆ.
ಭಗತ್ ಸಿಂಗ್ ಗೆಟಪ್ಪಿನಲ್ಲಿದ್ದ ಚಿತ್ರದ ಫಸ್ಟ್ ಲುಕ್ ಈಗಾಗಲೇ ಭರ್ಜರಿ ಕ್ಲಿಕ್ ಆಗಿರೋದ್ರಿಂದ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರಪ್ರೇಮಿಗಳೆಲ್ಲರೂ ಮಾಸ್ಟರ್‍ಪೀಸ್‍ಗಾಗಿ ಕಾಯುವಂತಾಗಿದೆ. ಆದರೆ ಮಂಜು ತಿಳಿಸಿರುವಂತೆ, ಭಗತ್ ಸಿಂಗ್ ಬಗೆಗಿನ ಚಿತ್ರ ಇದಲ್ಲವಾಗಿದ್ದು ಹೊಸ ರೀತಿಯಲ್ಲಿ ಭಗತ್ ಸಿಂಗ್ ಎಪಿಸೋಡ್ ಬಳಸಿಕೊಳ್ಳಲಾಗುತ್ತಿದೆಯಂತೆ. ಅದು ಹೇಗೆ ಎಂಬುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್!
Advertisement