ನರ್ಸಮ್ಮನ ಪಿಚ್ಚರ್‍ಗೆ ನಿರ್ಮಾಪಕಿಯಾಗಿ ರಾಗಿಣಿ..!
ರಾಗಿಣಿ ಶೀಘ್ರದಲ್ಲೇ ನಿರ್ಮಾಪಕಿಯಾಗಲಿದ್ದಾರಾ? ಹೌದೆನ್ನುತ್ತಿದೆ ಗಾಂಧಿನಗರದ ಮೂಲಗಳು. ನರ್ಸಮ್ಮನ ಪಿಚ್ಚರ್ ಎಂಬ ಶೀರ್ಷಿಕೆಯೊಂದು ಈಗಾಗಲೇ ಫಿಲಂ ಛೇಂಬರ್‍ನಲ್ಲಿ ರಿಜಿಸ್ಟರ್ ಆಗಿದ್ದು, ಈ ನರ್ಸಮ್ಮನ ಪಿಚ್ಚರ್ರಿಗೆ ನಾಯಕಿ ಮತ್ತು ನಿರ್ಮಾಪಕಿಯಾಗಿ ರಾಗಿಣಿ ಬರಲಿದ್ದಾರೆ ಎಂಬುದು ಸದ್ಯದ ಬಿಗ್ ನ್ಯೂಸ್.
ಟೈಟಲ್ ಕೇಳುತ್ತಿದ್ದಂತೆಯೇ ಇದು ನರ್ಸ್ ಜಯಲಕ್ಷ್ಮಿ ಕಥೆಯಾ? ಇಂಥ ಕಾಂಟ್ರವರ್ಸಿಯಲ್ ಸಬ್ಜೆಕ್ಟ್ ಯಾಕೆ ರಾಗಿಣಿ ಆಯ್ಕೆ ಮಾಡಿದ್ದಾರೆ ಎಂಬ ಮಾತುಕತೆ ಶುರುವಾಗಿದೆ. ಆದರೆ ಮೂಲಗಳ ಪ್ರಕಾರ ಈ ಕಥೆಗೂ ಜಯಲಕ್ಷ್ಮಿ ಬದುಕಿಗೂ ಯಾವ ಸಂಬಂಧವೂ ಇಲ್ಲವಂತೆ. ಆದರೂ ಇದೊಂದು ಸತ್ಯಘಟನೆಗಳ ಆಧಾರಿತ ಸಿನಿಮಾ ಆಗಲಿದೆಯಂತೆ. ಅಂದ ಹಾಗೆ ನಿರ್ದೇಶಕ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸಂಗೀತ ನಿರ್ದೇಶಕ ಮಿಲಿಂದ್ ಧರ್ಮಸೇನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಕಥೆ ಚಿತ್ರಕಥೆ ಕೂಡ ಅವರದ್ದೇ. ಕಥೆ ಕೇಳಿ ಥ್ರಿಲ್ ಆಗಿರುವ ರಾಗಿಣಿ, ನಟಿಯಾಗಿ ಮಾತ್ರ ಕಾಣಿಸಿಕೊಳ್ಳಬೇಕಿದ್ದವರು, ನಿರ್ಮಾಪಕಿಯಾಗುವ ಮನಸ್ಸು ಮಾಡಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಸಂಗೀತ ನಿರ್ದೇಶಕ ಮಿಲಿಂದ್ ಧರ್ಮಸೇನ್ ಸ್ಯಾಂಡಲ್ ವುಡ್‍ಗೆ ಕಂಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ರಘುರಾಮಪ್ಪ ನಾಯಕತ್ವದಲ್ಲಿ ಮತ್ತದೇ ಸಂಜೆ ಎಂಬ ಚಿತ್ರ ಘೋಷಿಸಿರುವ ಮಿಲಿಂದ್, ಗೌರಿ ಪುತ್ರ ಚಿತ್ರದ ನಂತರ ರಾಜಕೀಯದಲ್ಲಿ ಬ್ಯುಸಿಯಾಗಿ ಯಾವ ಚಿತ್ರಕ್ಕೂ ಸಂಗೀತವನ್ನೂ ನೀಡಿರಲಿಲ್ಲ. ಆದರೆ ಈಗ ಫುಲ್ ಟೈಮ್ ಸಿನಿಮಾ ಕಡೆ ಮುಖ ಮಾಡಿರುವ ಮಿಲಿಂದ್, ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರಕ್ಕಾಗಿ ರಿಯಲ್ ಲೈಫ್ ರಾಜಕಾರಣಿಗಳಾದ ರಘುಪತಿ, ರಮೇಶ್ ಕುಮಾರ್ ಮುಂತಾದವರನ್ನು ಕರೆತರಲಿದ್ದಾರೆಂದು ತಿಳಿದು ಬಂದಿದೆ.
ಶೀರ್ಷಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಚಿತ್ರ ರಾಗಿಣಿ ಕೆರಿಯರ್ ಗೊಂದು ಮಹತ್ವದ ತಿರುವು ನೀಡಲಿದೆ ಎಂಬುದು ಸಿನಿಮಾದ ಕಥೆ ಕೇಳಿರುವವರ ಅಭಿಪ್ರಾಯ. ಈ ಹಿಂದೆ ತಮ್ಮ ಹೊಸ ಚಿತ್ರವೊಂದಕ್ಕೆ ಉಪ್ಪೀ'ಸ್ ಲವ್ ಸ್ಟೋರಿ ಎಂಬ ಶೀರ್ಷಿಕೆ ರಿಜಿಸ್ಟರ್ ಮಾಡಲು ಹೋಗಿ ವಿವಾದಕ್ಕೆ ಕಾರಣವಾಗಿದ್ದ ಮಿಲಿಂದ್, ಆ ನಂತರ ತಾವಾಗಿಯೇ ಆ ಟೈಟಲನ್ನು ಬದಲಿಸಲು ನಿರ್ಧರಿಸಿದ್ದರು. ಆದರೆ ಈ ಬಾರಿ ಶೀರ್ಷಿಕೆ ವಿವಾದದಿಂದ ಸದ್ಯಕ್ಕಂತೂ ಪಾರಾಗಿದೆ ಎನ್ನಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ