

ಕನ್ನಡದಲ್ಲಿ ಸಸ್ಪೆನ್ಸ್ ಕಂ ಥ್ರಿಲ್ಲರ್ ಸಿನಿಮಾಗಳಿಗೆ ಬರವಿಲ್ಲ. ಗಾಂಧಿನಗರದಲ್ಲಿ ಇಂಥ ಸಿನಿಮಾಗಳು ಆಗಾಗ ಸೆಟ್ಟೇರುತ್ತಲೇ ಇರುತ್ತವೆ.
ಲಾಸ್ಟ್ ಬಸ್, ತಮಿಸ್ರದಂತಹ ಚಿತ್ರಗಳ ಹಿಂದೆಯೇ ಈಗ ಆ ರಾತ್ರಿ ಹೆಸರಿನಲ್ಲೊಂದು ಚಿತ್ರ ಶುರುವಾಗಿದೆ. ಆದರೆ, ಇಂಥ ಸಿನಿಮಾಗಳು ಯಾವಾಗ ಶುರುವಾಗುತ್ತವೆ, ಎಂದು ಮುಗಿಯುತ್ತವೆ ಗೊತ್ತಾಗಲ್ಲ. ಆ ಚಿತ್ರದ ತಂಡಗಳು ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡಾಗ ಮಾತ್ರ ಸಿನಿಮಾ ಮುಕ್ತಾಯದ ಸುದ್ದಿ ಸದ್ದು ಮಾಡುತ್ತದೆ. ಈಗ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಆ ರಾತ್ರಿ' ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಇದು ಗಿರೀಶ್ ಹೆಗ್ಡೆ ಅವರ ಊಟಿ ಹೆಸರಿನ ಕಾದಂಬರಿ ಆಧರಿತ ಚಿತ್ರ. ಈಗಾಗಲೇ ಸೆನ್ಸಾರ್ ಆಗಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಲಾಗಿದೆ.
ಈ ಚಿತ್ರವನ್ನು ನಿರ್ದೇಶಿಸಿರುವುದು ಮಂಡ್ಯ ನಾಗರಾಜ್. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮಹಿಳಾ ಕಾನೂನು ಪುಸ್ತಕದಲ್ಲಿ ಮಾತ್ರ ಇದೆ. ಆದರೆ, ಮಹಿಳೆಯರು ಅನ್ಯಾಯಕ್ಕೆ ಒಳಗಾದಾಗ ಅಂಥ ಯಾವ ಕಾನೂನುಗಳು ನೆರವಿಗೆ ಬರುತ್ತಿಲ್ಲ. ಅಲ್ಲದೆ ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ. ಇದು ಯಾಕೆ? ಎಂದು ಪ್ರಶ್ನಿಸುವ ಕಥೆ ಈ ಚಿತ್ರದಲ್ಲಿದೆ. ಇಡೀ ಸಿನಿಮಾ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುತ್ತದೆ ಎಂಬುದು ಚಿತ್ರದ ನಿರ್ದೇಶಕರ ಮಾತು.
ಆದರೆ, ಚಿತ್ರಕ್ಕೆ ಆ ರಾತ್ರಿ ಎನ್ನುವ ನೈಟ್ ಎಫೆಕ್ಟ್ ಶೀರ್ಷಿಕೆ ಇದ್ದರೂ ಇದು ಹಾರರ್ ಸಿನಿಮಾ ಅಲ್ಲವಂತೆ. ಇದೇ ಚಿತ್ರದ ವಿಶೇಷ ಅಂತಲೂ ಅಂದುಕೊಳ್ಳಬಹುದು. ರವಿಚೇತನ್ ಹಾಗೂ ಅಮಿತಶ್ರೀ ಚಿತ್ರದ ಜೋಡಿ. ನ್ಯಾಯಕ್ಕಾಗಿ ಹೋರಾಡುವ ಮಹಿಳೆ ಪಾತ್ರದಲ್ಲಿ ಅಮಿತಶ್ರೀ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರಂತೆ. ಚಿತ್ರದಲ್ಲಿ ನಾಲ್ಕು ಫೈಟ್‍ಗಳಿವೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿರುವ ಉಮೇಶ್, ಇಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನಸಮುದ್ರ ಹಾಗೂ ಮುತ್ತತ್ತಿ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಂಡ್ಯ ಸತ್ಯ, ಶ್ರೀನಿವಾಸ್, ಸೌಮ್ಯ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಬಹುತೇಕ ಕಲಾವಿದರು ಹೊಸಬರೇ.