
ಬೆಂಗಳೂರು: ಸಿನಿಮಾ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ಮಾಪಕರ ಮಹತ್ವದ ಸಭೆಯಲ್ಲಿ ಪಾಲ್ಗೊಂಡ ನಂತರ ನಿರ್ಮಾಪಕರು ಸಭೆ ನಡೆಸಿ, ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಒಂದು ವೇಳೆ ನಿರ್ಮಾಪಕರ ಈ ನಿರ್ಧಾರವನ್ನು ಧಿಕ್ಕರಿಸಿ ಯಾವುದೇ ನಟರು ಇಂತಹ ಶೋಗಳಲ್ಲಿ ಭಾಗವಹಿಸಿದರೆ ಇತರೆ ನಿರ್ಮಾಪಕರೊಂದಿಗೆ ಸೇರಿ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಮಾಡುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ.
ಇಂದು ನಡೆದ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ನಿರ್ಮಾಪಕರ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇನ್ನು ಮುಂದೆ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಪರ್ಸೆಂಟೇಜ್ ರೂಪದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಬೇಕು. ಸ್ಟಾರ್ ನಟರು, ಹೊಸ ನಟರುಗಳ ರೇಟಿಗೆ ತಕ್ಕಂತೆ ಪರ್ಸಂಟೇಜ್ ರೂಪದಲ್ಲಿ ಹಂಚಿಕೆದಾರರು ನಿರ್ಮಾಪಕರಿಗೆ ನೀಡಬೇಕು, ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂಬಿತ್ಯಾದಿ ವಿಚಾರಗಳ ಕುರಿತು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಿರ್ಮಾಪಕ ಜಯಸಿಂಹ ಮುಸುರಿ ಅವರು, ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ.
ವೀಕೆಂಡ್ ಗಳಲ್ಲಿ ಖ್ಯಾತ ನಟರು ಟಿವಿಗಳಲ್ಲಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದುರಾಗುತ್ತಿದೆ ಎಂದು ಈ ಹಿಂದೆ ಹಲವು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರಿದ್ದರು. ಅಲ್ಲದೆ ಈ ಕುರಿತು ನಡೆದ ನಿರ್ಮಾಪಕ ಮತ್ತು ನಟರ ಸಭೆಯಲ್ಲಿ ವಿವಾದ ಉಂಟಾಗಿ ಹಲವು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಇದೀಗ ಮತ್ತೆ ನಿರ್ಮಾಪಕರು ನಟರ ರಿಯಾಲಿಟಿ ಶೋಗಳ ವಿರುದ್ಧ ಕಿಡಿಕಾರಿದ್ದು, ಧರಣಿ ಕೂರುವ ಕುರಿತು ಎಚ್ಚರಿಕೆ ನೀಡಿದ್ದಾರೆ.
Advertisement