
ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ದಿಢೀರ್ ಸರ್ ಪ್ರೈಸ್ ನೀಡಿದ್ದಾರೆ.
ನಿನ್ನೆ ಚಿತ್ರೀಕರಣ ನಿಮಿತ್ತ ಹೈದರಾಬಾದ್ ಗೆ ಆಗಮಿಸಿದ್ದ ಶಾರುಖ್ ಖಾನ್ ಅಲ್ಲಿಯೇ ಪಕ್ಕದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಟಾಲಿವುಡ್ ನಟ ಮಹೇಶ್ ಬಾಬು ಅವರನ್ನು ಸ್ವತಃ ತಾವೇ ತೆರಳಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್ ವಾಲೇ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಅಗಮಿಸಿದ್ದ ಶಾರುಖ್, ಅಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಇದೇ ವೇಳೆ ಇದೇ ಸ್ಟುಡಿಯೋದಲ್ಲಿ ಮಹೇಶ್ ಬಾಬು ಅಭಿನಯದ 'ಬ್ರಹ್ಮೋತ್ಸವಂ' ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವಿಚಾರ ತಿಳಿದ ಶಾರುಖ್ ಕೂಡಲೇ ಚಿತ್ರೀಕರಣದ ಜಾಗಕ್ಕೆ ತೆರಳಿ ಮಹೇಶ್ ಬಾಬು ಗೆ ಸರ್ ಪ್ರೈಸ್ ನೀಡಿದ್ದಾರೆ.
ಕಿಂಗ್ ಖಾನ್ ಶಾರೂಕ್ ಬರುತ್ತಿದ್ದಂತೆಯೇ ಮಹೇಶ್ ಬಾಬು ಸೇರಿದಂತೆ ಬ್ರಹ್ಮೋತ್ಸವಂ ಚಿತ್ರ ತಂಡ ಥ್ರಿಲ್ ಆಗಿದೆ. ಶಾರೂಕ್ ಈ ವೇಳೆ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಹಾಗೂ ಅವರ ಪುತ್ರನನ್ನೂ ಭೇಟಿ ಮಾಡಿದರಲ್ಲದೇ ಫೋಟೋವನ್ನೂ ಕೂಡ ತೆಗೆಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಮಹೇಶ್ ಬಾಬು ಅವರು ಟ್ವೀಟ್ ಮಾಡಿದ್ದು, ಶಾರುಖ್ ಭೇಟಿಯಿಂದ ತಮಗೆ ಬಹಳ ಖುಷಿಯಾಗಿದೆ ಎಂದು ಹೇಳಿದ್ದಾರೆ.
3 ದಿನಗಳ ಹಿಂದಷ್ಟೇ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಶಾರೂಕ್ ರನ್ನು ಭೇಟಿಯಾಗ ಬಯಸಿ ಟ್ವೀಟ್ ಮಾಡಿದ್ದ ವೇಳೆ ಸೈನಾ ಕುಟುಂಬದವರನ್ನು 'ದಿಲ್ ವಾಲೇ' ಸೆಟ್ ನಲ್ಲೇ ಶಾರೂಕ್ ಭೇಟಿಯಾಗಿದ್ದರು.
Advertisement