
ಬೆಂಗಳೂರು: ಹಿಂದಿ ಸಿನೆಮಾ 'ಓ ಮೈ ಗಾಡ್'ನನ್ನು ಕನ್ನಡದಲ್ಲಿ 'ಮುಕುಂದ ಮುರಾರಿ'ಯಾಗಿ ರಿಮೇಕ್ ಮಾಡಲು ಹೊರಟಿರುವ ನಂದ ಕಿಶೋರ್ ನಾಯಕಿಯ ಪಾತ್ರಕ್ಕೆ ನಿಖಿತಾ ತುಕ್ರಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಉಪೇಂದ್ರ ಎದುರು ನಿಖಿತಾ ನಟಿಸಲಿದ್ದಾರೆ. ಈ ಹಿಂದೆ ಈ ಜೋಡಿ 'ದುಬೈ ಬಾಬು' ಸಿನೆಮಾದಲ್ಲಿ ಕಾಣಿಸಿಕೊಂಡಿತ್ತು. ಈ ಸಿನೆಮಾದಲ್ಲಿ ಸುದೀಪ್ ಕೂಡ ಒಬ್ಬ ನಾಯಕ ನಟ.
ಬೆಂಗಳೂರಿಗೆ ಬಂದಿರುವ ನಟಿ ನಿಖಿತಾ ಇಂದಿನಿಂದ ಸಿನೆಮಾ ತಂಡ ಸೇರಲಿದ್ದಾರೆ. ನಾನು ಹಿಂದಿ ಸಿನೆಮಾ 'ಓ ಮೈ ಗಾಡ್'ನ ಅಭಿಮಾನಿ ಎನ್ನುವ ನಿಖಿತಾ "ನಾನು ಕನ್ನಡ ಸಿನೆಮಾ ಒಪ್ಪಿಕೊಂಡು ಬಹಳ ದಿನಗಳಾದವು. ನನ್ನ ಕೊನೆಯ ಸಿನೆಮಾ 'ರಿಂಗ್ ರೋಡ್ ಸುಮಾ'. ನಾನು ಈ ಸಿನೆಮಾದ ಬಗ್ಗೆ ಮತ್ತು ತಾರಾಗಣದ ಬಗ್ಗೆ ತಿಳಿದಾಗ ತಕ್ಷಣ ಒಪ್ಪಿಕೊಂಡೆ" ಎನ್ನುತ್ತಾರೆ.
ಅವರ ಹಿಂದಿ ಸಿನೆಮಾ 'ಟ್ರಾಫಿಕ್' ಗೆ ಡಬ್ಬಿಂಗ್ ಮುಗಿಸಿರುವ ನಿಖಿತಾ ಬಿಡುಗಡೆಗಾಗಿ ಕಾಯುತ್ತಿದ್ದರಂತೆ.
ಆದರೆ ಅವರು ಹೆಚ್ಚು ಉತ್ಸಾಹದಿಂದಿರುವುದು ತಮ್ಮ ೫೦ನೆಯ ಸಿನೆಮಾದ ಬಗ್ಗೆ. "ನಾನು ಮಲಯಾಳಂನಲ್ಲಿ ನನ್ನ ೪೯ ಸಿನೆಮಾ ಒಪ್ಪಿಕೊಂಡಿದ್ದೇನೆ. ಅರ್ಧ ಶತಕಕ್ಕೆ ಇನ್ನೊಂದೇ ಸಿನೆಮಾ ಬಾಕಿ. ನನಗೆ ಬಹಳ ಹೆಮ್ಮೆಯಿದೆ. ಮುಂಬೈನಿಂದ ಬಂದು ಎಲ್ಲ ದಕ್ಷಿಣ ಭಾರತದ ಭಾಷೆಗಳಲ್ಲಿ ತೊಡಗಿಸಿಕೊಂಡೆ. ನನ್ನ ೫೦ನೆಯ ಸಿನೆಮಾದ ಆಯ್ಕೆಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ. ಇದು ವಿಶೇಷವಾಗಿರುತ್ತದೆ" ಎನ್ನುತ್ತಾರೆ ನಿಖಿತಾ.
Advertisement