
ಹಿರಿಯ ನಿರ್ದೇಶಕ ಭಗವಾನ್ ಈ ಇಳಿವಯಸ್ಸಿನಲ್ಲೂ ನಟನೆಗಿಳಿದಿದ್ದಾರೆ. 'ಕೋಮಾ' ಹೆಸರಿನ ಚಿತ್ರವೊಂದರಲ್ಲಿ ಅವರದ್ದು ಪ್ರಮುಖ ಪಾತ್ರವಂತೆ. ಅವರೊಂದಿಗೆ ನಿರ್ದೇಶಕ ಗುರುಪ್ರಸಾದ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮಟ್ಟಿಗೆ ಒಂದಷ್ಟು ವಿಶೇಷತೆಗಳನ್ನು ಸೃಷ್ಟಿಸಿರುವ 'ಕೋಮಾ' ಚಿತ್ರ ತಂಡ ಸದ್ಯಕ್ಕೆ ಚಿತ್ರೀಕರಣದ ಹಂತದಲ್ಲಿದೆ. ಸೌಂದರ್ಯ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಶಿವಮೊಗ್ಗದ ರವಿ ಮತ್ತು ಚೇತನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರಿಗೂ ಇದು ಚೊಚ್ಚಲ ಚಿತ್ರ. ಕಾರ್ತಿಕ್ ಕುಮಾರ್ ನಾಯಕನಾಗಿ ಅಭಿನಯಿಸಲಿದ್ದು, ಶೃತಿ ನಂದೀಶ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಸುಚೇಂದ್ರ ಪ್ರಸಾದ್, ಬಿ ಸುರೇಶ್, ಶಿಳ್ಳೆ ಮಂಜು, ಅಜಿತ್, ಮಹೇಶ್ ಮತ್ತಿತರರು ಚಿತ್ರದಲ್ಲಿದ್ದಾರೆ. ಅರುಣ್ ಸಂಗೀತ ಸಯೋಜನೆ ಮಾಡಿದ್ದಾರೆ. ಚಿತ್ರದ ನಿರ್ಮಾಣ ಹಾಗೂ ನಿರ್ದೇಶನದಲ್ಲಿರುವ ಯುವಕರೆಲ್ಲರೂ ಐಟಿ ಉದ್ಯೋಗಿಗಳು. ಸಿನಿಮಾ ಮೇಲಿನ ಪ್ರೀತಿಗಾಗಿ ತಮ್ಮನ್ನು ಬಣ್ಣದ ಲೋಕಕ್ಕೆ ಪರಿಚಯಿಸಿಕೊಂಡಿದ್ದು, ಈಗಾಗಲೇ 15ಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಯುವಕರ ತಂಡ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ
ಮಟ್ಟದ ಪ್ರಶಸ್ತಿಗೂ ಪಾತ್ರವಾಗಿದೆ. ಈಗ ಕಿರುಚಿತ್ರದಿಂದ ಹಿರಿತೆರೆಗೆ ಕಾಲಿಟ್ಟಿದ್ದು, ಮೊದಲ ಪ್ರಯತ್ನವಾಗಿ `ಕೋಮಾ'ಕ್ಕೆ ಕೈ ಹಾಕಿದೆ. ಸಾಮಾನ್ಯವಾಗಿ ಕೋಮಾ ಅಂದರೆ, ಪ್ರಜ್ಞಾಹೀನ ಎನ್ನಲಾಗುತ್ತದೆ. ಆದರೆ, ಈ ಚಿತ್ರ ಕೋಮಾ ಎನ್ನುವ ಶೀರ್ಷಿಕೆ ಹೊತ್ತರೂ ಪ್ರೇಕ್ಷಕರ ಊಹೆಗೆ ನಿಲುಕದ ಹೊಸ ಕತೆಯೊಂದನ್ನು ನೀಡಲಿದೆ. ಹಾಸ್ಯ, ಪ್ರೀತಿ, ಬಾಂಧವ್ಯ, ಸ್ನೇಹ, ವಿರಸ ಹಾಗೂ ಅಭಿರುಚಿಯ ಸಂಬಂಧಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ಹೀಗಾಗಿ ಭಗವಾನ್ ಅವರು ಕತೆ ಕೇಳಿದಾಕ್ಷಣ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಚಿತ್ರದಲ್ಲಿ ಅವರದ್ದು ಪ್ರಮುಖ ಪಾತ್ರ. ರವಿಚಂದ್ರನ್ ಕೂಡ ಚಿತ್ರದ ಕತೆಗೆ ಫಿದಾ ಆಗಿಬಿಟ್ಟರಂತೆ. ಚಿತ್ರೀಕರಣವೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮಡಿಕೇರಿ, ಶಿವಮೊಗ್ಗ ಸೇರಿದಂತೆ ವಿವಿಧ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಭಗವಾನ್ ಮತ್ತು ಗುರು ಪ್ರಸಾದ್ ಅಭಿನಯಿಸಿದ ಸನ್ನಿವೇಶಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎನ್ನುತ್ತಾರೆ ನಿರ್ದೇಶಕ ರವಿ.
Advertisement