

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. 'ನಿಜ' ಚಿತ್ರದ ನಿರ್ಮಾಪಕ ರವಿಚಂದ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಜಗ್ಗೇಶ್ ಮತ್ತು ರವಿಚಂದ್ ಬಾಲ್ಯ ಸ್ನೇಹಿತರು. ಮೊನ್ನೆ ಅದ್ಯಾಕೋ ಜಗ್ಗೇಶ್ ಗೆ ತನ್ನ ಈ ಗೆಳೆಯನನ್ನು ಭೇಟಿಯಾಗುವ ಮನಸ್ಸಾಯ್ತಂತೆ. ಹೀಗಾಗಿ ಮೊನ್ನೆ ಗೆಳೆಯನ ಮನೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರವಿಚಂದ್ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ .
ವಾಪಸ್ ಬರುವಾಗ ಮನೆವರೆಗೆ ಬಂದ ಜಗ್ಗೇಶ್‌ಗೆ ವಾರಿಯರ್ ಬೇಕರಿಯಿಂದ ಬಿಸ್ಕತ್ ಕೊಡಿಸುವಂತೆ ರವಿಚಂದ್ ತನ್ನ ತಾಯಿಗೆ ಹೇಳಿದರಂತೆ. ಅದೇ ಕೊನೆಯ ಭೇಟಿಯಾಯಿತು ಎಂದು ದುಃಖದಿಂದ ಕಣ್ಣೀರಿಟ್ಟಿದ್ದಾರೆ ಜಗ್ಗೇಶ್. ಮೊನ್ನೆ ಭೇಟಿಯಾದ ಗೆಳೆಯ ಇಂದು ತಮ್ಮ ಪಾಲಿಗಿಲ್ಲ ಎಂದು ದುಃಖಿತರಾಗಿರುವ ಜಗ್ಗೇಶ್ ರವಿಚಂದ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.