ಹಾಸ್ಯ ನಟ ಕಿರು ಶಾರ್ದಾ (ಸಂಗ್ರಹ ಚಿತ್ರ)
ಹಾಸ್ಯ ನಟ ಕಿರು ಶಾರ್ದಾ (ಸಂಗ್ರಹ ಚಿತ್ರ)

ಬಂಧನದ ಭಯವಿರಲಿಲ್ಲ, ಆಶ್ಚರ್ಯವಾಗಿತ್ತು: ನಟ ಕಿಕು ಶಾರ್ದಾ

ಬಂಧನ ಭೀತಿಯಿರಲಿಲ್ಲ. ಆದರೆ, ಆ ಘಟನೆ ನಿಜಕ್ಕೂ ದೊಡ್ಡ ಆಶ್ಚರ್ಯವನ್ನುಂಟು ಮಾಡಿತು ಎಂದು ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಹಾಸ್ಯ ನಟ ಕಿರು ಶಾರ್ದಾ ಅವರು ಮಂಗಳವಾರ ಹೇಳಿದ್ದಾರೆ...

ಮುಂಬೈ: ಬಂಧನ ಭೀತಿಯಿರಲಿಲ್ಲ. ಆದರೆ, ಆ ಘಟನೆ ನಿಜಕ್ಕೂ ದೊಡ್ಡ ಆಶ್ಚರ್ಯವನ್ನುಂಟು ಮಾಡಿತು ಎಂದು ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವ ಹಾಸ್ಯ ನಟ ಕಿರು ಶಾರ್ದಾ ಅವರು ಮಂಗಳವಾರ ಹೇಳಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ಒಂದರಲ್ಲಿ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಘಟನೆ ನಡೆದಾಗ ನಾನು ಒಬ್ಬಂಟಿ ಎಂಬ ಭಾವನೆಯುಂಟಾಗಿತ್ತು. ಅಲ್ಲದೆ, ಘಟನೆ ಬಹಳ ಆಶ್ಚರ್ಯನ್ನುಂಟು ಮಾಡಿತ್ತು. ಕಾರ್ಯಕ್ರಮ ಪ್ರಸಾರದ ನಂತರ ಪ್ರತಿಕ್ರಿಯೆಗಳನ್ನು ನೋಡಿ ಈ ಬಗ್ಗೆ ಕ್ಷಮೆಯನ್ನು ಕೋರಿದ್ದೆ. ಬಂಧನದ ಬಗ್ಗೆ ನನಗೆ ಭಯವಾಗಿರಲಿಲ್ಲ ಎಂದು ಹೇಳಿದ್ದಾರೆ.

ನಾನೊಬ್ಬ ಮನರಂಜನೆ ನೀಡುವ ವ್ಯಕ್ತಿಯಾಗಿ, ನಾನು ಬಳಸುವ ಪದಗಳ ಬಗ್ಗೆ ಯಾವಾಗಲೂ ಒಂದಲ್ಲ ಎರಡು ಬಾರಿ ಯೋಚಿಸುತ್ತೇನೆ. ನಾನು ಬಳಸುವ ಪದಗಳ ಬಗ್ಗೆ ಬಹಳ ಎಚ್ಚರಿಕೆಯಿಂದಿರುತ್ತೇನೆ. ನನಗೆ ಜನರು ನನಗುವುದು ಬೇಕು. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಾಗಿರಲಿಲ್ಲ.

ಕಿಕು ಶಾರ್ದಾ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಫ್ ಡಬ್ಲ್ಯೂಸಿಇ (ಪಶ್ಚಿಮ ಭಾರತದ ಸಿನಿಮಾ ನೌಕರರ ಸಂಘ) ಪ್ರಧಾನ ಕಾರ್ಯದರ್ಶಿ ಅವರು, ಕಿಕು ಶಾರ್ದಾ ಅವರ ಬಂಧನ ಅನಿರೀಕ್ಷಿತವಾಗಿ ನಡೆದ ಘಟನೆಯಾಗಿದೆ. ಘಟನೆ ಕುರಿತಂತೆ ಇದೀಗ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಕಿಕು ಶಾರ್ದಾ ಅವರ ಬೆನ್ನ ಹಿಂದೆ ನಾವು ನಿಂತಿದ್ದೇವೆ. ಮುಂದಿನ ದಿನಗಳಲ್ಲಿ ಸಿನಿರಂಗ ಯಾರೊಬ್ಬರಿಗಾದರೂ ಈ ರೀತಿಯ ಸನ್ನಿವೇಶ ಎದುರಾಗಲು ಬಿಡುವುದಿಲ್ಲ. ಒಂದು ವೇಳೆ ಎದುರಾಗಿದ್ದೇ ಆದರೆ, ಅವರ ಹಿಂದೆ ನಾವು ನಿಲ್ಲುತ್ತೇವೆ. ಇಡೀ ಸಿನಿಮಾ ರಂಗ ನ್ಯಾಯಕ್ಕಾಗಿ ಪ್ರತಿಭಟಿಸಲಿದೆ ಎಂದು ಹೇಳಿದ್ದಾರೆ.

ನಟಿ ರೇಣುಕಾ ಶಹಾನೆ ಮಾತನಾಡಿ, ಒಬ್ಬರನ್ನು ಅನುಕರಣೆ ಮಾಡುವುದನ್ನೇ ಮಿಮಿಕ್ರಿ ಎಂದು ಹೇಳುವುದು, ಕಿಕು ಶಾರ್ದಾ ಒಬ್ಬ ಉತ್ತಮ ವ್ಯಕ್ತಿ,. ಕಿಕು ಶಾರ್ದಾ ಅವರ ಮಕ್ಕಳು ಓದುತ್ತಿರುವ ಶಾಲೆಯಲ್ಲೇ ನನ್ನ ಮಕ್ಕಳು ಓದುತ್ತಿದ್ದಾರೆ. ಇದೀಗ ಮಕ್ಕಳು ಕೂಡ ಕಿಕು ಶಾರ್ದಾ ಅವರ ಬಂಧನ ಕುರಿತಂತೆ ಶಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಘಟನೆಗಳು ಮಕ್ಕಳ ಮನಸ್ಥಿತಿ  ಮೇಲೆ ಪರಿಣಾಮ ಬೀರಲಿದೆ. ಕಾನೂನು ದುರಪಯೋಗ ಪಡಿಸಿಕೊಳ್ಳುವ ಪ್ರಯತ್ನಗಳು ನಡೆಯಬಾರದು. ನಾವು ಏನೇ ಮಾಡಬೇಕಿದ್ದರೂ ಅದರ ಬಗ್ಗೆ ಒಂದಲ್ಲ ಎರಡು ಬಾರಿ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಕಿಕು ಶಾರ್ದಾ ಅವರು ದೇರಾ ಸಾಚಾ ಸೌಧದ ಮುಖ್ಯಸ್ಥ ಗುರ್ಮೀತ್ ಸಿಂಗ್ ರಾಮ್ ರಹೀಮ್ ಅವರನ್ನು ಅನುಕರಣೆ ಮಾಡಿ ಮಿಮಿಕ್ರಿಯೊಂದನ್ನು ಮಾಡಿದ್ದರು. ಈ ಕಾರ್ಯಕ್ರಮದ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮ ಹಲವು ವಿವಾದಗಳನ್ನು ಹುಟ್ಟುಹಾಕಿತ್ತು. ಕಾರ್ಯಕ್ರಮ ಪ್ರಸಾರದ ನಂತರ ಗುರ್ಮೀತ್ ಅವರ ಅನುಯಾಯಿಗಳು, ಕಿಕು ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂದು ಪ್ರಕರಣವೊಂದನ್ನು ದಾಖಲಿಸಿದ್ದರು. ನಂತರ ತಮ್ಮ ನಟನೆ ಕುರಿತಂತೆ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದ ಕಿಕು ಅವರು, ಯಾರಿಗೂ ನೋವುಂಟು ಮಾಡುವ ಹಾಗೂ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆಂದು ಹೇಳಿಕೊಂಡಿದ್ದರು.

ನಂತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂಬ ದೂರಿನನ್ವಯ ಮುಂಬೈ ಪೊಲೀಸರು ಕಿಕು ಶಾರ್ದಾ ಅವರನ್ನು ಜನವರಿ 13ರಂದು ಬಂಧನಕ್ಕೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಿಕು ಶಾರ್ದಾ ಅವರಿಗೆ 14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೊಪ್ಪಿಸಿತ್ತು.

ನಂತರ ಬಂಧನವಾಗ ಸಂಜೆ ವೇಳೆಗೆ ಕೈತಾಲ್ ಕೋರ್ಟ್ ನಿಂದ ಜಾಮೀನು ಪಡೆದಿದ್ದ ಕಿಕು ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಪ್ರಕರಣ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದ ಪೊಲೀಸರು ಮತ್ತೆ ಕಿಕು ಅವರನ್ನು ಬಂಧನಕ್ಕೊಳಪಡಿಸಿ ಗುರುವಾರ ಬಿಡುಗಡೆ ಮಾಡಿದ್ದರು. ಇದೀಗ ಈ ಘಟನೆಗೆ ಚಿತ್ರರಂಗ ಗಣ್ಯರು ಹಲವು ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದು, ಕಿಕು ಶಾರ್ದಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com