
ಬೆಂಗಳೂರು: ಯುವ ನಿರ್ದೇಶಕರ ಹೊಸ ಅಲೆಯ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಾಣುತ್ತಿರುವುದು ಕನ್ನಡ ಚಿತ್ರರಂಗದ ನಿರ್ಮಾಪಕರನ್ನು ಮರುಚಿಂತನೆಗೆ ದೂಕಿದೆ. ಐತಿಹಾಸಿಕ ಡ್ರಾಮಾ ಚಿತ್ರಕಥೆ ಹೊಂದಿದ್ದ ಪ್ರೇಮ್ ನಿರ್ದೇಶನದ 'ಕಲಿ' ಚಿತ್ರಕ್ಕೆ ನಿರ್ಮಾಕರು ಸದ್ಯಕ್ಕೆ ತಡೆ ಹಾಕಿದ್ದಾರೆ.
ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿದ್ದಾರೆ ಎಂದು ಬಹಳ ಪ್ರಚಾರ ಪಡೆದಿದ್ದ ಈ ಸಿನೆಮಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆ ಡಿ ಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಮತ್ತಿತರ ತಾರೆಯರ ಉಪಸ್ಥಿತಿಯಲ್ಲಿ ಚಾಲನೆಗೊಂಡಿತ್ತು. ಈ ಸಿನೆಮಾವನ್ನು ಈಗ ಸ್ಥಗಿತಗೊಳಿಸಿರುವುದಾಗಿ ತಿಳಿಸುತ್ತಾರೆ ನಿರ್ಮಾಪಕ ಸಿ ಆರ್ ಮನೋಹರ್.
"ಮೊದಲಿಗೆ ಪ್ರೇಮ್ ಬಂದು ಕಥೆ ಹೇಳಿದ್ದಾಗ ಕಥೆ ಅದ್ಬುತವಾಗಿತ್ತು ಮತ್ತು ಅದರಲ್ಲಿ ಎಲ್ಲಾ ಕಮರ್ಶಿಯಲ್ ಅಂಶಗಳಿದ್ದವು. ಆದರೆ ನಂತರ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯಲ್ಲಿ ಅವರು ಐತಿಹಾಸಿಕ ಕಥಾಹಂದರದ ಸಿನೆಮಾ ಮಾಡಲು ನಿಶ್ಚಯಿಸಿದರು. ಆದರೆ ಆ ಸಿನೆಮಾಗೆ ಹೆಚ್ಚಿನ ಸಮಯ ಹಿಡಿಯುತ್ತದೆ ಹಾಗೂ ಅದೊಂದೇ ಸಿನೆಮಾಗೆ ನಟರ ಸಮಯವನ್ನು ಹೆಚ್ಚಿನ ದಿನಗಳಿಗೆ ಹಿಡಿದಿಡುವುದು ಕಷ್ಟ. ಆದುದರಿಂದ ಬೇರೆ ವಿಷಯದ ಮೇಲೆ ಕೆಲಸ ಮಾಡಲಿದ್ದೇವೆ" ಎನ್ನುತ್ತಾರೆ.
ಪ್ರೇಮ್ ಈಗಾಗಲೇ ಮತ್ತೊಂದು ಸಿನೆಮಾದ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಚಾಲನೆಗೊಳ್ಳಲಿದೆ ಎನ್ನುತ್ತಾರೆ ಮನೋಹರ್.
ಈ ಸಿನೆಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಕನ್ನಡದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರೇ ನಟಿಸಲಿದ್ದು, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಶಿವರಾಜ್ ಕುಮಾರ್ ಬದಲಿಗೆ ನಾಗಾರ್ಜುನ ನಟಿಸಲಿದ್ದಾರಂತೆ. "ನಾವು ನಾಗಾರ್ಜುನ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರು ಒಪ್ಪುವ ಭರವಸೆಯಿದೆ. ಅಂತಿಮವಾದ ಮೇಲೆ ಅಧಿಕೃತ ಘೋಷಣೆ ಮಾಡಲಿದ್ದೇವೆ" ಎನ್ನುತ್ತಾರೆ ಮನೋಹರ್.
Advertisement