ಬಿಗ್ ಸ್ಟಾರ್ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡರೆ ಎರಡು ಚಿತ್ರಗಳಿಗೂ ಭಾರಿ ಹೊಡೆತ ಬೀಳುತ್ತದೆ. ಅಂತಹದರಲ್ಲಿ ಉಪೇಂದ್ರ-ಸುದೀಪ್ ನಟನೆಯ ಮುಕುಂದ ಮುರಾರಿ ಹಾಗೂ ಯಶ್ ನಟನೆಯ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರಗಳು ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದ್ದು ಎರಡು ಚಿತ್ರಗಳ ನಡುವೆ ಕ್ಲಾಶ್ ಆಗಲಿವೆ.
ಮುಕುಂದಾ ಮುರಾರಿ ಚಿತ್ರವು ಕಳೆದ ಸೆಪ್ಟೆಂಬರ್ 18ರಂದು ಬಿಡುಗಡೆಯಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿ ಅಕ್ಟೋಬರ್ 28ಕ್ಕೆ ಫಿಕ್ಸ್ ಆಗಿದೆ. ಈ ಮಧ್ಯೆ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಂತು ಸ್ಟ್ರೇಟ್ ಫಾರ್ವಡ್ ಚಿತ್ರ ನವೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಆ ಚಿತ್ರವೂ ಸಹ ಇದೇ ದೀಪಾವಳಿಗೆ ಬಿಡುಗಡೆಯಾಗುತ್ತಿರುವುದರಿಂದ ಎರಡು ಬಿಗ್ ಸ್ಟಾರ್ ಚಿತ್ರಗಳ ನಡುವೆ ಕ್ಲಾಶ್ ಆಗಲಿದೆ.
ಸಂತು ಸ್ಟ್ರೇಟ್ ಫಾರ್ವಡ್ ಚಿತ್ರವನ್ನು ಮಹೇಶ್ ರಾವ್ ನಿರ್ದೇಶಿಸಿದ್ದು, ಕೆ.ಮಂಜು ಚಿತ್ರವನ್ನು ನಿರ್ಮಿಸಿದ್ದಾರೆ. ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸಲಾಗಿದ್ದು, ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ ನಾಲ್ಕನೇ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಇನ್ನು ಮುಕುಂದಾ ಮುರಾರಿ ಚಿತ್ರವನ್ನು ಸ್ಟಾರ್ ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಭಗವಾನ್ ಕೃಷ್ಣನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಉಪೇಂದ್ರ ನಾಸ್ತಿಕನಾಗಿ ಕಾಣಿಸಿಕೊಳ್ಳುತ್ತಿದ್ದು ಈ ಜೋಡಿಯ ಚಿತ್ರವು ಸಹ ಬಹನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.