ಚೆನ್ನೈ: ೧೦೦೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ತಮಿಳು ನಟ ಮತ್ತು ಬರಹಗಾರ ವಿನು ಚಕ್ರವರ್ತಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ ೭೪ ವರ್ಷ ವಯಸ್ಸಾಗಿತ್ತು.
ಮೂರುವರ್ಷಗಳಿಂದ ಅನಾರೋಗ್ಯ ತೊಂದರೆಗಳಿಂದ ಬಳಲುತ್ತಿದ್ದ ಚಕ್ರವರ್ತಿ ವಿಧಿವಶರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಅವರು ೧೦೦೨ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಬಹುತೇಕ ತಮಿಳು ಚಿತ್ರಗಳು.
೧೯೪೫ರಲ್ಲಿ ಜನಿಸಿದ್ದ ಚಕ್ರವರ್ತಿ ಸ್ಕ್ರಿಪ್ಟ್ ಬರಹಗಾರರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸದ್ದರು. ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆಗೆ ಕೂಡ ಕೆಲಸ ಮಾಡಿದವರು.
೧೯೭೭ರಲ್ಲಿ ಇವರ ಪ್ರತಿಭೆ ಗುರುತಿಸಿದ್ದ ನಿರ್ಮಾಪಕ ತಿರ್ಪುರ್ ಮಣಿ, ಕನ್ನಡ ಸಿನೆಮಾ 'ಪರಸಿಂಗದ ಗೆಂಡೆತಿಮ್ಮ'ದಲ್ಲಿ ಮೊದಲ ಬಾರಿಗೆ ನಟನೆಯ ಅವಕಾಶ ನೀಡಿದ್ದರು.
೯೦೦ ಕ್ಕೂ ಹೆಚ್ಚು ತಮಿಳು ಸಿನೆಮಾದಲ್ಲಿ ನಟಿಸಿರುವ ಚಕ್ರವರ್ತಿಯವರ 'ಗೋಪುರಂಗಲ್ ಸೈವಾತಿಲ್ಲೈ', 'ಮಣಿತಂ', 'ಗುರು ಶಿಷ್ಯಂ', 'ಮಾಪಿಳೈ' ಮತ್ತು 'ಅಮರ್ಕಲಮ್' ಕೆಲವು ಜನಪ್ರಿಯ ಚಿತ್ರಗಳು.
ದಿವಂಗತ ನಟಿಯರಾದ ವಿಜಯಲಕ್ಷ್ಮಿ ಮತ್ತು ಸಿಲ್ಕ್ ಸ್ಮಿತಾ ಅವರ ವೃತ್ತಿ ಜೀವನ ಪ್ರಾರಂಭಕ್ಕೆ ಚಕ್ರವರ್ತಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಹಲವು ಕನ್ನಡ ಮತ್ತು ಮಲಯಾಳಂ ಸಿನೆಮಾಗಳಲ್ಲಿ ಕೂಡ ನಟಿಸಿದ್ದಾರೆ.
ಚಕ್ರವರ್ತಿ ಕೊನೆಯ ಬಾರಿಗೆ ತಮಿಳು ಸಿನೆಮಾ 'ವಾಯ ಮೂಡಿ ಪೆಸವೂಮ್' ನಲ್ಲಿ ನಟಿಸಿದ್ದರು. ಚಕ್ರವತಿ ತಮ್ಮ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ತೊರೆದಿದ್ದು, ಅಂತ್ಯಸಂಸ್ಕಾರ ಶುಕ್ರವಾರ ಜರುಗಲಿದೆ.