ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ: ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಣೆ

ಅಶ್ಲೀಲ ದೃಶ್ಯ, ಕೆಟ್ಟ ಭಾಷೆ ಬಳಕೆ ಹಾಗೂ ಇನ್ನಿತರೆ ಹಲವು ಕಾರಣಗಳನ್ನು ನೀಡಿ ಲಿಪ್'ಸ್ಟಿಕ್ ಅಂಡಲ್ ಮೈ ಬುರ್ಖಾ ಎಂಬ ಹಿಂದಿ ಚಲನಚಿತ್ರವೊಂದಕ್ಕೆ ಪ್ರಮಾಣ ಪತ್ರ ನೀಡಲು ಸೆನ್ಸಾನ್ ಮಂಡಳಿ...
ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ
ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ
ಮುಂಬೈ: ಅಶ್ಲೀಲ ದೃಶ್ಯ, ಕೆಟ್ಟ ಭಾಷೆ ಬಳಕೆ ಹಾಗೂ ಇನ್ನಿತರೆ ಹಲವು ಕಾರಣಗಳನ್ನು ನೀಡಿ ಲಿಪ್'ಸ್ಟಿಕ್ ಅಂಡಲ್ ಮೈ ಬುರ್ಖಾ ಎಂಬ ಹಿಂದಿ ಚಲನಚಿತ್ರವೊಂದಕ್ಕೆ ಪ್ರಮಾಣ ಪತ್ರ ನೀಡಲು ಸೆನ್ಸಾನ್ ಮಂಡಳಿ ನಿರಾಕರಿಸಿದೆ. 
ಚಲನಚಿತ್ರಗಳಿಗೆ ಸೆನ್ಸಾರ್ ಪ್ರಮಾಣಪತ್ರ ನೀಡುವ ಸಂಬಂಧ ಈ ಹಿಂದೆ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಸಾಕಷ್ಟು ವಿವಾದಗಳಿಗೆ ಸಿಲುಕಿ ಹಾಕಿಕೊಂಡಿದ್ದರು. ಇದೀಗ ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸುವುದರಿಂದಾಗಿ ಮತ್ತೆ ವಿವಾದಕ್ಕೀಡಾಗಿದ್ದಾರೆ.
ಈ ಚಿತ್ರದ ಕತೆ ಮಹಿಳಾ ಆಧಾರಿತವಾಗಿದ್ದು, ಜೀವನದ ಬಗ್ಗೆ ಅವರು ಹೊಂದಿರುವ ಕಲ್ಪನೆಯ ಕುರಿತಾಗಿದೆ. ಚಿತ್ರದಲ್ಲಿ ಲೈಂಗಿಕತೆ ದೃಶ್ಯಗಳು, ಕೆಟ್ಟ ಭಾಷೆ ಬಳಕೆ, ಲೈಂಗಿಕತೆಯ ಧ್ವನಿ, ಸಮಾಜದ ಒಂದು ವರ್ಗದ ಬಗ್ಗೆ ಕೆಲ ಸೂಕ್ಷ್ಮ ಸಂಗತಿಗಳು ಇತ್ಯಾದಿಗಳು ಚಿತ್ರದಲ್ಲಿವೆ. ಈ ಕಾರಣದಿಂದಾಗಿ ನಿಯಮಾನುಸಾರವಾಗಿ ಚಿತ್ರವನ್ನು ತಿರಸ್ಕರಿಸಲಾಗಿದೆ ಎಂದು ನಿಹಲಾನಿಯವರು ಹೇಳಿದ್ದಾರೆ. 
ನಿಹಲಾನಿ ಅವರ ಈ ಕ್ರಮಕ್ಕೆ ಚಿತ್ರರಂಗದಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗ ತೊಡಗಿವೆ. ಸೆನ್ಸಾರ್ ಮಂಡಳಿಯ ನಿಯಮ ಬದಲಿಸಲು ಕೆಲ ಶಿಫಾರಸ್ಸನ್ನು ಮಾಡಿದ್ದ ಖ್ಯಾತ ಚಿತ್ರ ನಿರ್ಮಾಣಕಾರ ಶ್ಯಾಂ ಬೆನಗಲ್ ಅವರೂ ಕೂಡ ಈ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ನಾನು ನೋಡಿಲ್ಲ. ಆದರೆ, ಚಿತ್ರಕ್ಕೆ ಪ್ರಮಾಣಪತ್ರ ನೀಡುವುದನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 
ಸೆನ್ಸಾರ್ ಮಂಡಳಿಯ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶ್ರೀವಾತ್ಸವ ಅವರು, ನಾನು ಸೋತಿಲ್ಲ.  ಎದೆಗುಂದಿದ ಮತ್ತು ಭ್ರಮನಿರಸನಗೊಂಡಿರುವ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಈ ಕುರಿತಂತೆ ನಾನು ಅಂತ್ಯದವರೆಗೂ ಹೋರಾಡಲು ಸಿದ್ಧಳಿದ್ದೇನೆ. ಯಾವುದೇ ತೊಡಕು ಬಂದರೂ ಏನೇ ಆದರೂ, ನನ್ನ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ. ಇದು ಕೇವಲ ನನ್ನ ಸಿನಿಮಾ ಎಂಬ ಕಾರಣಕ್ಕೆ ನಾನು ಹೋರಾಡಲು ಮುಂದಾಗುತ್ತಿಲ್ಲ. ನೈಜವಾದ ಹಾಗೂ ಮಹಿಳಾ ದನಿಗೆ ಸಂಬಂಧಿಸಿದ್ದು. ಮಹಿಳಾ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ. 
ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರ ಮಹಿಳಾ ಆಧಾರಿತ ಚಿತ್ರವಾಗಿದ್ದು, ಚಿತ್ರವನ್ನು ಅಲಂಕೃತ ಶ್ರೀವಾಸ್ತವ ಅವರ ನಿರ್ದೇಶಿಸಿದ್ದಾರೆ. ಚಿತ್ರವನ್ನು ಪ್ರಕಾಶ್ ಝಾ ನಿರ್ಮಾಣ ಮಾಡಿದ್ದು, ಲಖನೌ ನಗರದ ನಾಲ್ವರು ಮಹಿಳೆಯರ ಜೀವನವನ್ನು ಬಿಂಬಿಸುವ ಚಿತ್ರ ಇದಾಗಿದೆ. ಕೊಂಕಣಾ ಸೇನ್ ಶರ್ಮಾ, ರತ್ನಾ ಪಾಠಕ್ ಹಾಗೂ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿರುವುದರಿಂದ ಚಿತ್ರದ ತಂಡಕ್ಕೆ ತೀವ್ರ ಹಿನ್ನಡೆಯುಂಟಾದಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com