ಶೂಟಿಂಗ್ ವೇಳೆ ಸಹನಟಿ ಸಾವು ಪ್ರಕರಣ: ವಿಐಪಿ ಚಿತ್ರ ನಿರ್ದೇಶಕ ಸೇರಿ 7 ಮಂದಿ ವಿರುದ್ಧ ಕೇಸ್

: ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಶೂಟಿಂಗ್ ವೇಳೆ ಲಿಫ್ಟ್ ಗುಂಡಿಗೆ ಬಿದ್ದು ಸಹ ಕಲಾವಿದೆ ಸಾವನ್ನಪ್ಪಿದ ಪ್ರಕರಣ ಸಂಬಂಧ ...
ಶೂಟಿಂಗ್ ವೇಳೆ ಸಾವನ್ನಪ್ಪಿದ ಸಹ ಕಲಾವಿದೆ ಪದ್ಮಾವತಿ
ಶೂಟಿಂಗ್ ವೇಳೆ ಸಾವನ್ನಪ್ಪಿದ ಸಹ ಕಲಾವಿದೆ ಪದ್ಮಾವತಿ

ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಶೂಟಿಂಗ್ ವೇಳೆ ಲಿಫ್ಟ್ ಗುಂಡಿಗೆ ಬಿದ್ದು ಸಹ ಕಲಾವಿದೆ ಸಾವನ್ನಪ್ಪಿದ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ಸಿನಿಮಾ ನಿರ್ದೇಶಕ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮಿಳಿನ ವೇಲೆ ಇಲ್ಲಾ ಪತ್ತದಾರಿ ಕನ್ನಡ ಸಿನಿಮಾ ಶೂಟಿಂಗ್ ವೇಳೆ 41 ವರ್ಷದ ಪದ್ಮಾವತಿ ಪ್ರೆಸ್ಟೀಜ್ ಗ್ರೂಪ್ ನಿರ್ಮಿಸುತ್ತಿರುವ ಅಪಾರ್ಟ್ ಮೆಂಟ್ ನ ಲಿಫ್ಟ್ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಈ ಸಂಬಂಧ ನಿರ್ದೇಶಕ ನಂದ ಕಿಶೋರ್ ಸೇರಿದಂತೆ ನರಸಿಂಹ, ಹೆಗಡೆ, ಶೇಖರ್, ಗೌರಮ್ಮ ಹಾಗೂ ಪ್ರೆಸ್ಟೀಜ್  ಬಿಲ್ಡರ್ಸ್  ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ದೂರು ದಾಖಲಾಗಿದೆ. ಎಲ್ಲಾ ಆರೋಪಿಗಳು ತಲೆ ಮರೆಸಿಕೊಂಡಿದ್ದು ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಮನೆಗೆ ತೆರಳಿದಾಗ ಅಲ್ಲಿ ಅವರ ಪತ್ತೆಯಿಲ್ಲ, ಜೊತೆಗೆ ಅವರ ಫೋನ್ ಗಳು ಕೂಡ ಸ್ವಿಚ್ ಆಫ್ ಆಗಿವೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪದ್ಮಾವತಿ ಆಕಸ್ಮಿಕವಾಗಿ ಲಿಫ್ಟ್ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರಬೇಕು, ಆಕೆಯ ಕುಟುಂಬಸ್ಥರು ಹಣಕ್ಕಾಗಿ ಇದನ್ನು ದೊಡ್ಡ ವಿವಾದ ಮಾಡುತ್ತಿದ್ದಾರೆ ಎಂದು ನಿರ್ದೇಶಕ ನಂದ ಕಿಶೋರ್ ಪೊಲೀಸರಿಗೆ ಹೇಳಿದ್ದರು.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರೆಸ್ಟೀಜ್ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕ ವಿ ಗೋಪಾಲ್, ನಿರ್ಮಾಪಕರು ಸಿನಿಮಾ ಶೂಟಿಂಗ್ ಗೆ ಅವಕಾಶ ನೀಡುವಂತೆ ಕೋರಿದ್ದರು, ಜೊತೆಗೆ ಸುರಕ್ಷತೆ ಹಾಗೂ ಭದ್ರತೆಯ ಎಲ್ಲಾ ಜವಾಬ್ದಾರಿಗಳನ್ನು ತಾವೇ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಹಾನಿಯಾಗಿರುವುದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇವೆ, ಆಕೆಯ ಸಾವಿಗೆ ಸಂತಾಪ ಸೂಚಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com