ಫೋಟೋ ವಿವಾದ; ಟ್ರಂಪ್ ನನ್ನ ಜೀವನ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ: ಕ್ಯಾಥಿ ಗ್ರಿಫಿನ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕುಟುಂಬದವರು "ವೈಯಕ್ತಿಕವಾಗಿ ನನ್ನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹಾಸ್ಯನಟಿ ಕ್ಯಾಥಿ ಗ್ರಿಫಿನ್ ಹೇಳಿದ್ದಾರೆ.
ಲಾಸೆಂಜಲಿಸ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕುಟುಂಬದವರು "ವೈಯಕ್ತಿಕವಾಗಿ ನನ್ನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹಾಸ್ಯನಟಿ ಕ್ಯಾಥಿ ಗ್ರಿಫಿನ್ ಹೇಳಿದ್ದಾರೆ. ಕತ್ತರಿಸಿದ ಟ್ರಂಪ್ ತಲೆಯುನ್ನು ಹೋಲುವ ಮುಖವಾಡವನ್ನು ಹಿಡಿದ ಫೋಟೋವನ್ನು ಪ್ರಕಟ ಮಾಡಿದ್ದ ವಿವಾದ ಈಗ ಬೃಹತ್ತಾಗಿದೆ.
ಟ್ರಂಪ್ ಮತ್ತು ಅವರ ಕುಟುಂಬ ಟ್ವಿಟ್ಟರ್ ನಲ್ಲಿ ಈ ಫೋಟೋವನ್ನು ಖಂಡಿಸಿತ್ತು. ಇದರ ನಂತರ ನನಗೆ ನಿರಂತರವಾಗಿ ಕೊಲೆ ಬೆದರಿಕೆ ಬರುತ್ತಿರುವುದಾಗಿ ಕ್ಯಾಥಿ ಹೇಳಿರುವುದಾಗಿ ವೆರೈಟಿ ಪತ್ರಿಕೆ ವರದಿ ಮಾಡಿದೆ.
ಪ್ರಚೋದನಕಾರಿ ಮತ್ತು ವಿಮರ್ಶಾತ್ಮಕ ರಾಜಕೀಯ ಹಾಸ್ಯ ಮಾಡುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರ ಇದು ಎಂದು ಕ್ಯಾಥಿ ಅವರ ಪರ ವಕೀಲೆ ಲಿಸಾ ಬ್ಲೂಮ್ ಹೇಳಿದ್ದಾರೆ.
"ನನಗೆ ಆಗುತ್ತಿರುವ ಸಮಸ್ಯೆ ಈ ಶ್ರೇಷ್ಟ್ರ ರಾಷ್ಟ್ರದಲ್ಲಿ ಈ ಹಿಂದೆ ಎಂದು ಸಂಭವಿಸಿರಲಿಲ್ಲ" ಎಂದು ತಮ್ಮ ಫೋಟೋಶೂಟ್ ಬಗ್ಗೆ ಟ್ರಂಪ್ ಕುಟುಂಬ ಪ್ರತಿಕ್ರಿಯಿಸಿರುವುದರ ಬಗ್ಗೆ ಶುಕ್ರವಾರ ಕ್ಯಾಥಿ ಹೇಳಿದ್ದಾರೆ.
"ಇದರ ನಂತರ ನನ್ನ ವೃತ್ತಿ ಜೀವನ ಕೊನೆಗಾಣುವಂತಿದೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಅವರು ನನಗೆ ಕಿರುಕುಳ ಕೊಟ್ಟಿದ್ದಾರೆ. ನಂತರ ನಾನು ಚಿಂತಿಸಿದೆ, ಇದು ಸರಿಯಲ್ಲ ಎಂದು ಅದಕ್ಕೆ ನಾನು ಕ್ಷಮೆ ಕೂಡ ಕೋರಿದ್ದೇನೆ. ಅದು ಕೂಡ ಪ್ರಾಮಾಣಿಕವಾಗಿಯೇ ಮಾಡಿದ್ದೇನೆ" ಎಂದು ಕ್ಯಾಥಿ ಹೇಳಿದ್ದಾರೆ.