ಕೋಲ್ಕತ್ತಾ: ಖ್ಯಾತ ಗಾಯಕಿ ಸಬಿತಾ ಚೌಧರಿ, ಐದು ತಿಂಗಳ ಕಾಲ ಕ್ಯಾನ್ಸರ್ ಜೊತೆಗೆ ಹೋರಾಡಿ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸಬಿತಾ ಖ್ಯಾತ ಸಂಗೀತ ನಿರ್ದೇಶಕ ದಿವಂಗತ ಸಲೀಲ್ ಚೌಧರಿ ಅವರ ಪತ್ನಿ.
೭೨ ವರ್ಷದ ಚೌಧರಿ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಜನವರಿಯಲ್ಲಿ ಶ್ವಾಸಕೋಶ ಮತ್ತು ಥೈರಾಯ್ಡ್ ಕ್ಯಾನ್ಸರ್ ಗೆ ಚೌಧರಿ ತುತ್ತಾಗಿರುವುದು ಪತ್ತೆಯಾಗಿತ್ತು.
ಭಾರತದ ಖ್ಯಾತ ಸಂಗೀತ ನಿರ್ದೇಶಕನನ್ನ ಮದುವೆಯಾಗಿದ್ದ ಸಬಿತಾ ತಮ್ಮ ಅಮೋಘ ಗಾಯನದಿಂದ ಸ್ವತಃ ಛಾಪು ಮೂಡಿಸಿದ್ದವರು. ಇವರು ಹಾಡಿರುವ ಹಲವು ಬೆಂಗಾಳಿ ಹಾಡುಗಳು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.
ಚೌದರಿ ಅವರ ಸಾವಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. "ಜನಪ್ರಿಯ ಗಾಯಕಿ ಸಬಿತಾ ಚೌಧರಿ ಅವರ ಸಾವು ನನಗೆ ದುಃಖ ತಂದಿದೆ. ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.